ಹೊನ್ನಾಳಿ :ಭಾನುವಾರದಿಂದ(ಅಕ್ಟೋಬರ್ 30)ನಾಪತ್ತೆಯಾಗಿದ್ದ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಎಂ.ಆರ್.ಚಂದ್ರಶೇಖರ್ ಅವರು ಗುರುವಾರ ಕಾಲುವೆಯಲ್ಲಿ ಬಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಆಳವಾದ ತನಿಖೆಯ ವೇಳೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಗುರುವಾರ ಮಧ್ಯಾಹ್ನ ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಿನ ಏರ್ಬ್ಯಾಗ್ ಓಪನ್ ಆಗಿರುವುದು ಕಂಡುಬಂದಿದೆ.
ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು,ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಆಕ್ರಂದನ
ರೇಣುಕಾಚಾರ್ಯ ನಿವಾಸದಲ್ಲಿ ಕಳೆದ ಮೂರು ದಿನಗಳಿಂದ ನೀರವ ಮೌನ ಆವರಿಸಿದ್ದು, ಶವ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನರು ಶಾಸಕರ ಮನೆಗೆ ಆಗಮಿಸುತ್ತಿದ್ದಾರೆ. ರೇಣುಕಾಚಾರ್ಯ ಅವರು ಶವ ಪತ್ತೆಯಾದ ಸ್ಥಳಕ್ಕೆ ಆಗಮಿಸಿದ್ದು,ಕಂಗಾಲಾಗಿ ಹಣೆಗೆ ಕೈಗಳಿಂದ ಬಡಿದುಕೊಂಡು ಗೋಳಾಡಿದರು. ಬೆಂಬಲಿಗರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.