ಸಕಲೇಶಪುರ : ಬೆಳಗಾವಿಯಲ್ಲಿ ನಡೆದ ವಿಧಾನಪರಿಷತ್ ಅಧಿವೇಶನಕ್ಕೆ ಶಾಸಕ ಎಚ್ ಕೆ ಕುಮಾರಸ್ವಾಮಿ ಸಾಮಾನ್ಯ ಸ್ಲೀಪರ್ ಕೋಚ್ ಬೋಗಿಯಲ್ಲಿ ಪ್ರಯಾಣಿಸುವ ಮುಖಾಂತರ ಸರಳತೆಯನ್ನು ಮೆರೆದಿದ್ದಾರೆ.
ಅರಸೀಕೆರೆಯಿಂದ ಬೆಳಗಾವಿಗೆ ರೈಲಿನಲ್ಲಿ ಸಾಮಾನ್ಯ ಬೋಗಿಯಲ್ಲಿ ಅಧಿವೇಶನಕ್ಕೆ ಪ್ರಯಾಣಿಸಿ ಮಧ್ಯದಲ್ಲಿ ಕ್ಷೇತ್ರದಲ್ಲಿ ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಆಗಮಿಸಿ ಒಂದು ದಿನದ ನಂತರ ಪುನ: ಅರಸೀಕೆರೆಯಿಂದ ಬೆಳಗಾವಿಗೆ ಅಧಿವೇಶನಕ್ಕೆ ರೈಲಿನಲ್ಲಿ ಸಾಮಾನ್ಯ ಜನರಾಗಿ ಸಂಚರಿಸಿದ್ದಾರೆ. ಈ ಸಂಧರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಲಿಂಗೇಶ್ ಸಹ ಸಾಥ್ ನೀಡಿದ್ದಾರೆ.
ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎಚ್ ಕೆ ಕುಮಾರಸ್ವಾಮಿ ರಾಜ್ಯದ ಅತ್ಯಂತ ಸರಳ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ರೈಲಿನಲ್ಲಿ ಪ್ರಯಾಣಿಸುವ ಮುಖಾಂತರ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಮಾಜಿ ಸಚಿವ ಸುರೇಶ್ ಕುಮಾರ್, ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮುಂತಾದವರ ಹಾದಿಯಲ್ಲಿ ಶಾಸಕರು ಸಾಗುತ್ತಿರುವುದಕ್ಕೆ ಜನ ಸ್ವಾಗತಿಸಿದ್ದಾರೆ.
ಈ ಕುರಿತು ಶಾಸಕರು ವಾಸ್ತವ ನ್ಯೂಸ್ ನೊಂದಿಗೆ ಪ್ರತಿಕ್ರಿಯಿಸಿ ಅಧಿವೇಶನ ರಾಜ್ಯದ ಗಡಿಭಾಗವಾದ ಬೆಳಗಾವಿಯಲ್ಲಿ ನಡೆಯುತ್ತಿದ್ದು ಅಲ್ಲಿಗೆ ಕಾರಿನಲ್ಲಿ ಹೋಗುವುದು ತುಂಬಾ ಪ್ರಯಾಸಕರ ಈ ನಿಟ್ಟಿನಲ್ಲಿ ರೈಲು ಸಂಚಾರದ ಮುಖಾಂತರ ಹೋಗಿ ಅಧಿವೇಶನದಲ್ಲಿ ಭಾಗಿಯಾಗಿದ್ದೇನೆ. ನನ್ನ ಮೊದಲ ಚುನಾವಣೆಯಲ್ಲಿ ಸೈಕಲ್ ಮುಖಾಂತರ ಗ್ರಾಮ ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಲು ಹೋಗಿದ್ದೆ. ಹೀಗಾಗಿ ಕಾರಿನಲ್ಲೆ ತಿರುಗಾಡಬೇಕೆಂಬ ಆಸೆ ನನಗಿಲ್ಲ. ಪ್ರಯಾಣದ ಕ್ಷಣವನ್ನು ವ್ಯರ್ಥ ಮಾಡದೆ ಪುಸ್ತಕಗಳನ್ನು ಓದುವ ಮುಖಾಂತರ ಅಧಿವೇಶನಕ್ಕೆ ಗೆಳೆಯ ಲಿಂಗೇಶ್ ಜೊತೆ ಪ್ರಯಾಣಿಸಿದ್ದೇನೆ ಎಂದರು.