ಸಕಲೇಶಪುರ:- ತಾಲ್ಲೂಕಿನ ವನಗೂರು ಗ್ರಾ.ಪಂ ನ ಸಂಜೀವಿನಿ ಶೆಡ್ ನಿರ್ಮಾಣ ಕಾಮಗಾರಿಯನ್ನು ಮಹಿಳಾ ಸಂಘಕ್ಕೆ ನೀಡದೆ ಕಮಿಷನ್ ಆಸೆಗಾಗಿ 3ನೇ ವ್ಯಕ್ತಿಗೆ ನೀಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಮುಖಂಡೆ ಅನ್ನಪೂರ್ಣ ಶ್ರೀಧರ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವನಸಿರಿ ಸಂಜೀವಿನಿ ಗ್ರಾ ಪಂ ಒಕ್ಕೂಟದ ಮಹಿಳಾ ಸಂಘದ ಸದಸ್ಯರು ಸಂಜೀವಿನಿ ಶೆಡ್ ನಿರ್ಮಾಣ ಕಾಮಗಾರಿಯನ್ನು ಮಹಿಳಾ ಸಂಘಕ್ಕೆ ನೀಡುವಂತೆ ಮನವಿ ಮಾಡಿದ್ದರು ಶಾಸಕರು ಗಣನೆಗೆ ತೆಗೆದುಕೊಂಡಿಲ್ಲ, ಶಾಸಕರು ಹೋಗಿ ಬಂದ ಕಡೆಯಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳುತ್ತಾರೆ, ಆದರೆ ಸ್ಥಳೀಯ ಮಹಿಳೆಯರ ಬಗ್ಗೆ ಅಸಹನೆ ತೋರುತ್ತಿದ್ದಾರೆ. ವನಸಿರಿ ಸಂಜೀವಿನಿ ಗ್ರಾ ಪಂ ಒಕ್ಕೂಟದ ಮಹಿಳಾ ಸಂಘದ ಶೆಡ್ ಕಾಮಗಾರಿ 17.50 ಲಕ್ಷ ರೂ ಗಳಲ್ಲಿ ನಿರ್ಮಾಣವಾಗುತ್ತಿದೆ. ಇದನ್ನು ಮಹಿಳ ಸಂಘಕ್ಕೆ ನೀಡಲು ಮನವಿ ಮಾಡಿದ್ದರು ನೀವು ಆರ್ಥಿಕವಾಗಿ ಸಬಲರಲ್ಲ ಎಂದು ಕಾರಣ ನೀಡಲಾಗುತ್ತಿದೆ, ಇದು ಕುಂಟು ನೆಪ ವಾಗಿದೆ ಎಂದರು.ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಹಣ ಮಹಿಳೆಯರು ಭರಿಸಲು ಸಿದ್ದರಿದ್ದಾರೆ ತನ್ನ ಚಿನ್ನವನ್ನು ಅಡವಿಟ್ಟು ಕಾಮಗಾರಿ ನಡೆಸಲಿದ್ದಾರೆ ಎಂದರು, ಹೊರಗಿನವರು ಕೆಲಸ ಮಾಡಿದರೆ ಉತ್ತಮ ಗುಣಮಟ್ಟದ ಕೆಲಸ ಮಾಡುವುದಿಲ್ಲ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕು ಎಂಬುವುದು ಸಂಘದ ಮಹಿಳೆಯರ ಆಸೆಯಾಗಿದೆ . ಆದರೆ ಶಾಸಕರು ಕೇವಲ ಕಮಿಷನ್ ಆಸೆಗಾಗಿ ತಮ್ಮ ಆಪ್ತರಿಗೆ ಕೆಲಸ ನೀಡಿದ್ದಾರೆ ಎಂದು ದೂರಿದರು.
ಈ ಸಂಧರ್ಭದಲ್ಲಿ ಹೆತ್ತೂರು ವನಸಿರಿ ಸಂಜೀವಿನಿ ಗ್ರಾ.ಪಂ ಒಕ್ಕೂಟದ ಮಹಿಳಾ ಸದಸ್ಯ ರಾದ ಹೆತ್ತೂರು ಶೋಭಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿ