ಕಂದಾಯ ಅದಾಲತ್ ಸೌಲಭ್ಯ ಬಳಸಿಕೊಳ್ಳಿ – ಶಾಸಕ ಸಿಮೆಂಟ್ ಮಂಜು.
ಹಾಸನ/ಕಟ್ಟಾಯ : ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ಉದ್ದೇಶದಿಂದ ಕಂದಾಯ ಅದಾಲತ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ಹಾಸನ ತಾಲೂಕು ಕಟ್ಟಾಯ ಹೋಬಳಿಯಲ್ಲಿ ಪಿಂಚಣಿ ಅದಾಲತ್ ಹಾಗೂ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚು ಸಮಸ್ಯೆ ಇರುವುದು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ. ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೂ ಮಾತೃ ಇಲಾಖೆ ಇದ್ದಹಾಗೆ.ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆ, ಬದ್ಧತೆಯಿಂದ ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಬೇಕು ಎಂದು ವಿವಿಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿಯಲ್ಲಿ ಫಲಾನುಭವಿಗಳು ಪಿಂಚಣಿ ಮಂಜೂರಾತಿ, ಪೌತಿ ಖಾತೆ ಸವಲತ್ತುಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ವೇದಿಕೆ ಎಂದರು.
ಜಿಲ್ಲಾಧಿಕಾರಿ ಸತ್ಯಬಾಮ ಮಾತನಾಡಿ, ಕಂದಾಯ ಇಲಾಖೆ ಯಾವಾಗಲೂ ಜನಪರವಾಗಿದೆ ನಮ್ಮ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯವರು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಪಹಣಿ ತಿದ್ದುಪಡಿ, ಕಂದಾಯ ಅದಾಲತ್,ವಿವಿಧ ಇಲಾಖೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಖಾತೆ ಬದಲಾವಣೆಗಳಲ್ಲಿ ಜಂಟಿ ಖಾತೆಗಳದ್ದೇ ಹೆಚ್ಚಿನ ಸಮಸ್ಯೆಗಳಾಗುತ್ತಿದೆ.ಫಲಾನುಭವಿಗಳುದಾಖಲೆಗಳನ್ನು ಸಿರಯಾಗಿ ನೀಡಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ವಂಶವೃಕ್ಷಗಳಲ್ಲಿ ಹೆಸರುಗಳನ್ನು ಮರೆಮಾಚುವುದು, ತಪ್ಪು ಮಾಹಿತಿ ನೀಡುವುದು ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಈ ವೇಳೆ 94c ನಡಿ 91 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಯಿತು.60 ವರ್ಷ ಮೇಲ್ಪಟ್ಟ 23 ಮತ್ತು 65 ವರ್ಷ ಮೇಲ್ಪಟ್ಟವರಿಗೆ ವೃಧ್ಯಾಪ ವೇತನ,7 ಜನರಿಗೆ ವಿಧವಾ ವೇತನ ಮತ್ತು ಒಬ್ಬರಿಗೆ ಅಂಗವಿಕಲ ಪೋಷಣಾ ವೇತನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪೌತಿ ಖಾತೆ, ಕುಳುವಾಡಿಕೆ ಸೇರಿ ದಂತೆ ಸರ್ಕಾರಿ ಗೋಮಾಳಕ್ಕೆ ಸಂಭಂದಪಟ್ಟ ಮಂಜೂರಾತಿ ಪತ್ರಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಶ್ವೇತಾ, ಗೊರೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗರಾಜ್, ತಾಲೂಕು ಪಂಚಾಯತ್ ಕಾರ್ಯನಿರ್ವಣ ಅಧಿಕಾರಿ ಗಿರೀಶ್, ಎಡಿಎಲ್ ಆರ್ ಶಂಶುದ್ದಿನ್, ಉಪ ತಹಸೀಲ್ದಾರ್ ಕುಮಾರಸ್ವಾಮಿ, ರಾಜಸ್ವ ನಿರೀಕ್ಷೆಕ ಕಿರಣ್ ಸೇರಿದಂತೆ ಮುಂತಾವರು ಉಪಸ್ಥಿತರಿದ್ದರು.