ಶಾಸಕ ಸಿಮೆಂಟ್ ಮಂಜು ಸಹಕಾರ: ವಾರ್ಡಿನ ಜನರ ಶ್ರಮ: ಗುಂಡಿ ರಸ್ತೆಗೆ ಮುಕ್ತಿ
ಸಕಲೇಶಪುರ : ಪಟ್ಟಣದ ಪುರಸಭೆ ವ್ಯಾಪ್ತಿಯ ಕುಶಾಲನಗರದ 8ನೇ ವಾರ್ಡಿನಲ್ಲಿ ದೀರ್ಘಕಾಲದಿಂದ ಗುಂಡಿಗಳಿಂದ ಬಳಲುತ್ತಿದ್ದ ರಸ್ತೆಯನ್ನು ಸ್ಥಳೀಯ ನಿವಾಸಿಗಳು ಶಾಸಕರ ಸಹಕಾರದೊಂದಿಗೆ ತಾವೇ ಸರಿಪಡಿಸುವ ಮೂಲಕ ಮಾದರಿಯಾಗಿದ್ದಾರೆ.
ವಾರ್ಡಿನ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ವಾಹನ ಸಂಚಾರ ಕಷ್ಟವಾಗಿತ್ತು. ಬೈಕ್ ಸೇರಿದಂತೆ ಸಣ್ಣ ವಾಹನಗಳು ಗುಂಡಿಯಲ್ಲಿ ಬಿದ್ದು ಅಪಘಾತಕ್ಕೀಡಾಗುತ್ತಿದ್ದವು. ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿವಾಸಿಗಳು ಶಾಸಕರ ಬಳಿ ತಮ್ಮ ಅಹವಾಲು ಸಲ್ಲಿಸಿದರು.
ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು ಅವರು ಅಗತ್ಯವಾದ ಸಾಮಗ್ರಿಗಳನ್ನು ಒದಗಿಸಿ ಸಹಕಾರ ನೀಡಿದರು. ಶಾಸಕರ ಸಹಕಾರದಿಂದ ಪ್ರೋತ್ಸಾಹಗೊಂಡ ಜನರು ಕೈಯಲ್ಲಿ ಸಲಕರಣೆ ಹಿಡಿದು ರಸ್ತೆ ಗುಂಡಿಗಳನ್ನು ಕಾಂಕ್ರೀಟ್‌ನಿಂದ ಮುಚ್ಚುವ ಮೂಲಕ ಸ್ವಯಂಪ್ರೇರಿತ ಕೆಲಸಕ್ಕೆ ಮುಂದಾದರು.
ಜನರ ಒಗ್ಗಟ್ಟಿನ ಶ್ರಮದಿಂದ ಗುಂಡಿರಸ್ತೆ ಸಮಸ್ಯೆ ನಿವಾರಣೆಯಾಗಿದ್ದು, ಇತರ ವಾರ್ಡುಗಳಿಗೆ ಮಾದರಿಯಾಗಿದೆ. ಶಾಸಕರ ಸಹಕಾರಕ್ಕೆ ಸ್ಥಳೀಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.



