ನಾಲ್ಕು ಕೋಟಿ ವೆಚ್ಚದಲ್ಲಿ ಪಟ್ಟಣ ಅಭಿವೃದ್ದಿ ಕಾಮಗಾರಿ: ಶಾಸಕ ಎಚ್.ಕೆ ಕುಮಾರಸ್ವಾಮಿ
ಸಕಲೇಶಪುರ: ಮಾದರಿ ಸಕಲೇಶಪುರ ಪಟ್ಟಣ ಮಾಡುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭಾ ಮುಂಭಾಗ ಬುಧವಾರ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆಯ (ಹಂತ-4ರ) ಅನುದಾನ ನಾಲ್ಕು ಕೋಟಿ ರೂಪಾಯಿಗಳು ಬಿಡುಗಡೆಯಾಗಿದ್ದು ಇದರಲ್ಲಿ 23 ವಾರ್ಡ್ ಗಳಲ್ಲಿ ವಿವಿಧೆಡೆ ರಸ್ತೆ ಮತ್ತು ಚರಂಡಿ ಕಾಮಗಾರಿ ಕೆಲಸ ಹಾಗೂ ಪುರಸಭೆಯ ವಿವಿಧ ಅನುದಾನದಲ್ಲಿ ವಾರ್ಡ್ಗಳ ಕಾಮಗಾರಿ ಅಭಿವೃದ್ಧಿ ಮಾಡಲಾಗುವುದು. ಪಟ್ಟಣದ ತೇಜಸ್ವಿ ವೃತ್ತವನ್ನು ಅಗಲಿಕರಣ ಮಾಡಿ ಅರೇಹಳ್ಳಿ ರಸ್ತೆಯಲ್ಲಿರುವ ನಮ್ಮ ಕ್ಲಿನಿಕ್ ವರೆಗೆ ಮರು ಡಾಂಬರಿಕರಣ ಮಾಡಲಾಗುತ್ತದೆ ಜೊತೆಗೆ ಪಟ್ಟಣದ ನಾಗರಿಕರ ಬಹುದಿನದ ಕನಸಾದ ಸ್ವಾಗತ ಕಮಾನನ್ನು ನಿರ್ಮಾಣಮಾಡಲಾಗುವುದು ಹಾಗೂ ಉತ್ತಮ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದರು. ಒಟ್ಟಾರೆಯಾಗಿ ಸುಂದರ ಸಕಲೇಶಪುರ ನಗರ ನಿರ್ಮಾಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ, ಉಪಾಧ್ಯಕ್ಷೆ ವಿದ್ಯಾ.ಪಿ.ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಹಾಗೂ ಬಹುತೇಕ ಪುರಸಭಾ ಸದಸ್ಯರುಗಳು , ನಾಮನಿರ್ದೇಶಿತ ಸದಸ್ಯರುಗಳು ಹಾಜರಿದ್ದರು.