ಬೇಲೂರು: ಬೇಲೂರು ತಾಲೂಕಿನ ಹಳೇಬೀಡು ಪುಷ್ಪಗಿರಿಯಲ್ಲಿ ಜನವರಿ 9ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 89ನೇ ಸರ್ವ ಸದಸ್ಯರ ಸಭೆ ನಡೆಯಲಿದ್ದು ಸಿದ್ಧತೆಗಳು ಪ್ರಾರಂಭಗೊಂಡಿವೆ.
ಸಭೆಯ ಹಿನ್ನೆಲೆಯಲ್ಲಿ ಬುಧವಾರ ಪುಷ್ಪಗಿರಿಗೆ ಭೇಟಿ ನೀಡಿ ಪೂರ್ವ ತಯಾರಿ ಪರಿಶೀಲನೆ ನಡೆಸಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಭೆಯ ರೂಪ ರೇಷಗಳ ಬಗ್ಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಬೇಲೂರು ಮತ್ತು ಹಳೇಬೀಡು ಪತ್ರಕರ್ತರಿಗೆ ಕೆಲ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ವಿವಿಧ ಭಾಗಗಳಿಂದ ಪತ್ರಕರ್ತ ಸದಸ್ಯರು ಬರಲಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ತುರ್ತು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ವಿಜಯಪುರದಲ್ಲಿ ನಡೆಯಬೇಕಾಗಿದ್ದ ಈ ಸಭೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸಭೆಯನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎಂದರು.
ಪುಷ್ಪಗಿರಿ ಕ್ಷೇತ್ರ ಶ್ರೀಗಳ ಸಾನಿಧ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಸಮೀಪದಲ್ಲೇ ವಿಶ್ವವಿಖ್ಯಾತ ಶಿಲ್ಪ ಕಲೆಯ ಬೀಡಾದ ಹಳೇಬೀಡು ಮತ್ತು ಬೇಲೂರು ಇದ್ದು, ಅದನ್ನು ವೀಕ್ಷಿಸಬಹುದಾಗಿದೆ ಎಂದರು.
ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಬೇಲೂರು ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘಗಳು ಜಂಟಿಯಾಗಿ ಸರ್ವ ಸದಸ್ಯರ ಸಭೆ ಸಂಘಟಿಸುತ್ತಿರುವುದು ಅಭಿನಂದನೀಯ ಎಂದರು.
ಸರ್ವ ಸದಸ್ಯರ ಸಭೆಗೆ ಮುನ್ನ ಔಪಚಾರಿಕವಾಗಿ ಪುಷ್ಪಗಿರಿ ಪೀಠಾಧ್ಯಕ್ಷರಾದ ಶ್ರೀ ಸೋಮಶೇಖರ ಸ್ವಾಮೀಜಿ ಸಾನಿಧ್ಯದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮತ್ತು ಸರ್ವ ಸದಸ್ಯರ ಸಭೆಗೆ ಸಕಲ ವ್ಯವಸ್ಥೆಯನ್ನು ಮಾಡುವುದಾಗಿ ಬೇಲೂರು ತಾಲ್ಲೂಕು ಪತ್ರಕರ್ತರು ತಿಳಿಸಿದರು.
ಈ ಸಂಧರ್ಭದಲ್ಲಿ ಬೇಲೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಉಪಾಧ್ಯಕ್ಷರಾದ ಹೆಬ್ಬಾಳು ಹಾಲಪ್ಪ, ಪೈಂಟ್ ರವಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಹಳೇಬೀಡು ಕುಮಾರ್, ನಿರ್ದೇಶಕರಾದ ಹೆಚ್.ಎಂ.ದಯಾನಂದ, ಸದಸ್ಯರಾದ ರಘುನಾಥ್ ಮತ್ತಿತರರು ಹಾಜರಿದ್ದರು.