ಸಕಲೇಶಪುರ: ತಾಲೂಕಿನ ನಡಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲೆ ನಮಗೆ ಪಡಿತರ ವಿತರಿಸುವಂತೆ ಕುಂಬರಡಿ ಗ್ರಾಮಸ್ಥರು ಆಹಾರ ಇಲಾಖೆ ನಿರೀಕ್ಷಕ ಶರವಣ್ ಅವರಿಗೆ ಮನವಿ ನೀಡಿದ್ದಾರೆ.
ತಾಲೂಕಿನ ಕುಂಬರಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಣೆ ಮಾಡದಿರುವ ಕಾರಣ ಅಂಗಡಿಯನ್ನು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಅಮಾನತ್ತುಗೊಳಿಸಿ ನಡಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಲ್ಲಿನ ಗ್ರಾಹಕರು ಪಡಿತರ ಪಡೆಯಲು ಅವಕಾಶ ಕಲ್ಪಿಸಿದ್ದರು. ಆದರೆ, ಕುಂಬರಡಿ ಗ್ರಾಮದ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಅಂಗಡಿ ಅಮಾನತ್ತು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಿದ್ದು ನ್ಯಾಯಾಲಯ ಅಧಿಕಾರಿಗಳ ಕ್ರಮ ಅಮಾನ್ಯಗೊಳಿಸಿ ಆದೇಶಿಸಿದ್ದು ಅಕ್ಟೋಬರ್ ತಿಂಗಳಿನಿಂದ ಪಡಿತರವನ್ನು ಕುಂಬರಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲೆ ನೀಡಲು ಆದೇಶಿಸಿದೆ. ಆದರೆ,ನಾವು ಕುಂಬರಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವುದಿಲ್ಲ ನಡಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲೆ ಪಡಿತರ ವಿತರಿಸಲು ಅವಕಾಶ ಕಲ್ಪಿಸ ಬೇಕು ಇಲ್ಲದಿದ್ದಲ್ಲಿ ಬಿಪಿಎಲ್ ಎಪಿಎಲ್ ಸೇರಿದಂತೆ ಎಲ್ಲಾ ಪಡಿತರ ಕಾರ್ಡುಗಳನ್ನು ಹಿಂತಿರುಗಿ ನೀಡುತ್ತೇವೆ ಎಂದು ಕುಂಬರಡಿ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಪಡಿತರ ಕುಟುಂಬದ ಸದಸ್ಯರು ಆಹಾರ ಇಲಾಖೆಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾ.ಪಂ ಸದಸ್ಯ ರಘುನಂದನ್,ಮುಖಂಡರಾದ ಲಕ್ಷ್ಮಣ್, ರಾಕೇಶ್, ಮೋಹನ್, ಆನಂದ್ ಮುಂತಾದವರಿದ್ದರು.