ಸಕಲೇಶಪುರ: ತಾಲೂಕಿನ ವನಗೂರು ಸಮೀಪದ ಗೊದ್ದು,ಕೊಂಗಳ್ಳಿ ಗ್ರಾಮದ ಘಟ್ಟದ ಬಾಗಿಲು ಕುಮಾರ ಲಿಂಗೇಶ್ವರ ದೊಡ್ಡಯ್ಯಸ್ವಾಮಿಯ 352ನೇ ಜಾತ್ರೆ ಮಹೋತ್ಸವ ಸಾವಿರಾರು ಭಕ್ತರ ಪೂಜೆ ಹರಕೆ ಹವನಗಳ ನಡುವೆ ಸೋಮವಾರ ಅದ್ದೂರಿಯಾಗಿ ನೆಡೆಯಿತು.
ಪಶ್ಚಿಮಘಟ್ಟದ ಬಿಸಿಲೆ ಹಾಗೂ ಕೊಡಗಿನ ಪುಷ್ಪಗಿರಿ ರಕ್ಷಿತ ಅರಣ್ಯದ ಅಂಚಿನಲ್ಲಿ ನೆಡೆಯುವ ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ಬಾರಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಂಬಲಗೆರೆ,ತಂಬೈಲು,ಕೊಂಗಳ್ಳಿ,ಹೊಂಗಡಹಳ್ಳ,ಮಾಗೇರಿ,ವನಗೂರು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಅವರ ಸಂಬಂಧಿಕರು ಈ ಜಾತ್ರೆಗೆ ತಪ್ಪದೆ ಬರುವುದು ವಾಡಿಕೆಯಾಗಿದ್ದು ಜೊತೆಗೆ ಕೊಡಗು,ಹಾಸನ,ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತರ ದಂಡು ಹರಿದು ಬಂದಿತು.
ಬೆಳಗ್ಗೆ 6 ಗಂಟೆ ಸುಮಾರಿಗೆ ಗೊದ್ದು ಸುತ್ತಮುತ್ತಲಿನ ಗ್ರಾಮಸ್ಥರು ತಂಬೈಲು ಗ್ರಾಮ ಮೂಲ ದೇವಸ್ಥಾನದಿಂದ ದೊಡ್ಡಯ್ಯನ ಉತ್ಸವ ಮೂರ್ತಿಯನ್ನು ಮಲೆನಾಡಿನ ಕರಡಿ ವಾದ್ಯ,ತಮಟೆ ಸುಗ್ಗಿ ಕುಣಿತದೊಂದಿಗೆ ಕೊಂಗಳ್ಳಿ ಕುಮಾರ ಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆ ತಂದರು. ಉತ್ಸವ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ವರ್ಷದ ಜಾತ್ರೆಯ ದಿನ ಮಾತ್ರವೇ ದೊಡ್ಡಯ್ಯಸ್ವಾಮಿ ದರ್ಶನವಾಗುವುದರಿಂದ ಭಕ್ತರು ನೂಕು ನುಗ್ಗಲಿನಲ್ಲಿ ಬಂದು ದೇವರ ದರ್ಶನ ಪಡೆದರು.