ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಬಂದೂಕು ಹಿಂತಿರುಗಿ ನೀಡಲು ಬೆಳೆಗಾರ ಸಂಘಟನೆಗಳ ಒತ್ತಾಯ
ಸಕಲೇಶಪುರ: ಮಾಜಿ ಶಾಸಕ ಎಚ್.ಎಂ ವಿಶ್ವನಾಥ್‌ರವರು ಈ ಹಿಂದೆ 2004ರಿಂದ 2008ರ ವರೆಗೆ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಬಹಳ ಉತ್ತಮ ಕೆಲಸಮಾಡಿರುತ್ತಾರೆ. ಅವರ ಅವಧಿಯಲ್ಲಿ ಕಾಡಾನೆ ಹಾವಳಿಯಿದ್ದು, ತುಂಬಾ ಸಾವು ನೋವುಗಳು ಸಂಭವಿಸಿದ್ದು, ಪ್ರತಿಯೊಂದನ್ನು ಅವರು ಕಣ್ಣಾರೆ ಕಂಡಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆಯ ಗಮನಸೆಳೆದಿರುತ್ತಾರೆ. ಆದರೂ ಸಹ ಯಾವುದೇ ಪರಿಹಾರ ದೊರಕಿರುವುದಿಲ್ಲ. ಅಂದಿನಿಂದ ಇದುವರೆಗೂ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಬೆಳೆಗಾರರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿರುತ್ತಾರೆ. ಆದರೂ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿಯು ದಿನೇ ದಿನೇ ಹೆಚ್ಚಾಗುತ್ತಾ ಇದ್ದು, ಅರಣ್ಯ ಇಲಾಖೆಯವರು ಕಳೆದ 2 ವರ್ಷಗಳಿಂದ ಆನೆ ಮೇಯಿಸಲು ಆರ್.ಆರ್. ಟಿ. ಮತ್ತು ಟಾಸ್ಕ್ ಫೋರ್ಸ್ ಎಂಬ ಪಡೆಗಳನ್ನು ನೇಮಿಸಿದ್ದು, ಹಿಡುವಳಿ ಜಮೀನಿನಲ್ಲಿ ರೈತರು ಬೆಳೆದ ಬೆಳೆಯನ್ನು ಮೇಯಿಸುತ್ತಿದ್ದಾರೆ. ರೈತರ ಪರಿಸ್ಥಿತಿಯ ಬಗ್ಗೆ ಮಾತ್ರ ಗಮನಹರಿಸುತ್ತಿಲ್ಲ. ಅವರ ಪರಿಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಕೆಲವು ಸಂದರ್ಭದಲ್ಲಿ ಮನೆಯವರ ಕಣ್ಣೆದುರೇ ಅವರ ಮನೆಯವರನ್ನು ಆನೆ ತುಳಿದು ಸಾಯಿಸಿದೆ. ಇಂತಹ ಹಲವು ದೃಶ್ಯಗಳನ್ನು ಹೆಚ್.ಎಂ. ವಿಶ್ವನಾಥ್ ರವರು ಕಣ್ಣಾರೆ ಕಂಡು ಹೋರಾಟ ಮಾಡಿರುತ್ತಾರೆ. ಸಾರ್ವಜನಿಕ ಸಭೆಯಲ್ಲಿ, ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಯ ಸಂತಾಪ ಸೂಚಕ ಸಭೆಯಲ್ಲಿ ಹಾಗು ಅಧಿಕಾರಿಗಳ ಸಭೆಯಲ್ಲಿ, ನನ್ನ ತೋಟದಲ್ಲಿ ಆನೆಗಳಿದ್ದು ನನ್ನ ಮೇಲೆ ಕಾಡಾನೆ ದಾಳಿಗೆ ಮುಂದಾದರೆ ನನ್ನ ಆತ್ಮ ರಕ್ಷಣೆಗಾಗಿ ನಾನು ಗುಂಡು ಹೊಡೆಯುತ್ತೇನೆ ಎಂದು ಹೇಳಿರುತ್ತಾರೆ. ತದಾ ನಂತರ ತಮ್ಮ ಹೇಳಿಕೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ. ತದನಂತರ ಅವರ ಬಂದೂಕು ಮತ್ತು ಲೈಸೆನ್ಸ್‌ನ್ನು ಡೆಪಾಸಿಟ್ ಮಾಡಲು ತಾವು ತಿಳಿಸಿರುತ್ತೀರಿ. ತಾವು ಕೇಳಿದ ವಿಷಯಕ್ಕೆ ಪತ್ರ ಮುಖೇನ ಉತ್ತರವನ್ನು ಹೆಚ್. ಎಂ. ವಿಶ್ವನಾಥ್‌ರವರು ನೀಡಿರುತ್ತಾರೆ.
ನಂತರ ಈ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳು ಮೌಖಿಕವಾಗಿ ಈ ವಿಷಯವನ್ನು ಅಲ್ಲಿಗೆ ಮುಗಿಸುವಂತೆ ತಿಳಿಸಿರುತ್ತಾರೆ. ಆದರೂ ತಾವು ಹೆಚ್.ಎಂ. ವಿಶ್ವನಾಥ್‌ರವರ ಲೈಸೆನ್ಸ್ ಮತ್ತು ಬಂದೂಕನ್ನು ಅಮಾನತು ಮಾಡಿರುವುದಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗು ಇತರೆ ಸಂಘಟನೆಗಳು ಖಂಡಿಸುತ್ತವೆ.
ಈ ವಿಷಯವು ಬೆಳೆಗಾರರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದ್ದು, ತಕ್ಷಣವೇ ತಾವು ಈ ತೀರ್ಮಾನವನ್ನು ವಾಪಾಸ್ಸು ಪಡೆದು ಸಾರ್ವಜನಿಕವಾಗಿ ಮಲೆನಾಡಿನಲ್ಲಿ ಶಾಂತಿಯಿಂದ ಬದುಕಲು ಅವರ ಲೈಸೆನ್ಸ್ ಮತ್ತು ಬಂದೂಕನ್ನು ವಾಪಾಸ್ ನೀಡಬೇಕೆಂದು “ಕರ್ನಾಟಕ ಬೆಳೆಗಾರರ ಒಕ್ಕೂಟ” ಒತ್ತಾಯಿಸುತ್ತದೆ.
ಈ ಸಂಧರ್ಭದಲ್ಲಿ ಕೆ.ಜಿ.ಎಫ್ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಕೃಷ್ಣಪ್ಪ, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಎಚ್.ಡಿ.ಪಿ.ಎ ಕಾರ್ಯದರ್ಶಿ ಎಂ.ಬಿ ರಾಜೀವ್,ಬೆಳೆಗಾರರದ ಬಿರಡಹಳ್ಳಿ ಮದನ್, ಹಾನುಬಾಳ್ ಚೇತನ್, ಹಲಸುಲಿಗೆ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.