ಕಾಶಿಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕದ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಭಾನುವಾರ ಭೇಟಿ ನೀಡಿ ಕಾಶಿಯಾತ್ರೆಯ ಸಹಾಯಧನ ರಶೀದಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಬಳಿಕ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಕಾಶಿಯಾತ್ರೆಗೆ ಸಹಾಯಧನ ಘೋಷಣೆ ಮಾಡಿದ ನಂತರ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಯಾತ್ರಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು. ಕಾಶಿಯಲ್ಲಿರುವ ಹಳೆಯ ಛತ್ರ ಮೈಸೂರು ಮಹಾರಾಜರು ಕಟ್ಟಿಸಿದ್ದಾರೆ. ಅದರ ನೈಜ ಶೈಲಿಯನ್ನು ಉಳಿಸಿಕೊಂಡು ಅಭಿವೃದ್ಧಿ ಸಾಧ್ಯವೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.