ಸಕಲೇಶಪುರ: ಕಾಂತಾರ ಚಲನಚಿತ್ರದ ಪ್ರಭಾವದಿಂದ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳಿಗೆ ಇದೀಗ ಜೀವ ಬರುತ್ತಿದೆ.
ಮಲೆನಾಡು ಹಾಗೂ ಕರಾವಳಿಯ ಸಂಸ್ಕೃತಿ ಒಂದು ರೀತಿಯಲ್ಲಿ ಅವಿಭಾಜ್ಯ ಸಂಬಂಧವನ್ನು ಹೊಂದಿದೆ. ಮಲೆನಾಡಿನಲ್ಲಿ ಕರಾವಳಿ ಭಾಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು ಇದರಿಂದ ಮಲೆನಾಡಿನಲ್ಲಿ ಕರಾವಳಿ ಶೈಲಿಯ ಆಹಾರ ಪದ್ದತಿ ಸಾಮಾನ್ಯವಾಗಿದೆ. ಮಲೆನಾಡಿನ ಗಣೇಶೋತ್ಸವ ವಿಸರ್ಜನಾ ಕಾರ್ಯಕ್ರಮಗಳಿಗೆ ತುಳುನಾಡಿನಿಂದ ಹುಲಿವೇಷ, ಗೊಂಬೆ ವೇಷಗಳನ್ನು ಕರೆಸುವುದು ಸಾಮಾನ್ಯವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಕರಾವಳಿ ಸಂಸ್ಕೃತಿ ಕಡಿಮೆಯಾಗಿ ಆಧುನಿಕತೆ ಹೆಚ್ಚಾಗುತ್ತಿತ್ತು. ಇದೀಗ ಕಾಂತಾರ ಚಲನಚಿತ್ರದಿಂದ ಪ್ರೇರಿತರಾಗಿ ಕರಾವಳಿ ಮೂಲದ ಕಲಾ ಪ್ರದರ್ಶನ ಮಾಡುವ ತಂಡವೊಂದು ಸ್ಥಳೀಯರೊಂದಿಗೆ ಹುಲಿ ವೇಷ, ಜೋಕರ್ ವೇಷ, ಮಂಗಳಮುಖಿ ವೇಷ, ಮಂಗಳ ವಾದ್ಯದೊಂದಿಗೆ ಪಟ್ಟಣದ ಬೀದಿಗಳಲ್ಲಿ ಹಣ ಸಂಗ್ರಹ ಮಾಡಿದ್ದು ಕಂಡು ಬಂದಿತು. ಜನರು ಸಹ ಈ ಪ್ರತಿಭೆಗಳನ್ನು ಗುರುತಿಸಿ ಹಣ ನೀಡಿ ಸೆಲ್ಫಿ ಫೋಟೋಗಳನ್ನು ತೆಗೆಯುವುದು ಕಂಡು ಬಂದಿತು. ಮುಂಬರುವ ದೀಪಾವಳಿಯಲ್ಲಿ ಮಂಗಳೂರಿನ ಕುದ್ರೋಳಿ ದೇವಾಲಯದ ಆವರಣದಲ್ಲಿ ನಡೆಯಲಿರುವ ಬೃಹತ್ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಧಿ ಸಂಗ್ರಹ ಮಾಡಲು ರಸ್ತೆ ಬದಿಯಲ್ಲಿ ಪ್ರದರ್ಶನ ನೀಡಲಾಗುತ್ತಿದೆ ಎಂದು ತಂಡದ ಮುಖ್ಯಸ್ಥ ಪ್ರಕಾಶ್ ಹೇಳಿಕೆ ನೀಡಿದ್ದಾರೆ.