ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಗೆ ಎರಡು ದಿನದ ಕಾರ್ಯಾಗಾರ ಆಯೋಜನೆ ಮಾಡಿದೆ. ಬುಧವಾರದಿಂದ ಎರಡು ದಿನಗಳ ಕಾಲ ಮೈಸೂರಿನಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಅಕ್ಟೋಬರ್ 19 ಮತ್ತು 20ರಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಹಿಂದೆ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾದಲ್ಲಿ ನೀಡಲಾಗಿದ್ದ ಟಾಸ್ಕ್ ಪೂರ್ಣಗೊಳಿಸಿದ್ದಾರೆಯೇ? ಎಂದು ಪರಿಶೀಲನೆ ನಡೆಯಲಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿರುವ 126 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ, ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸುವ ಕುರಿತು ಕಾರ್ಯಾಗಾರದಲ್ಲಿ ಸೂಚನೆಗಳನ್ನು ನೀಡಲಾಗುತ್ತದೆ.
ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, “ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಇದೆ. ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಹೀಗಾಗಿ ಕ್ಷೇತ್ರವಾರು ಆಕಾಂಕ್ಷಿಗಳನ್ನು ಕರೆದು ಮಾತನಾಡುತ್ತಿದ್ದೇವೆ” ಎಂದು ಹೇಳಿದರು.