ಕಾಡಾನೆ ದಾಳಿಗೆ ಇನ್ನೆಷ್ಟು ಅಮಾಯಕರ ಬಲಿಯಾಗಬೇಕು: ಶಾಸಕ ಸಿಮೆಂಟ್ ಮಂಜು ಆಕ್ರೋಶ
ಸಕಲೇಶಪುರ: ಕಾಡಾನೆ ದಾಳಿಗೆ ಪರಿಹಾರ ಹುಡುಕುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ತೀವ್ರ ಆಕ್ರೋಶ
ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಇದರಿಂದ ಜನಸಾಮಾನ್ಯರು ಆತಂಕದ ಪರಿಸ್ಥಿತಿ ದಿನನಿತ್ಯ ಎದುರಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಇರಲಿ ತಾತ್ಕಾಲಿಕ ಪರಿಹಾರವನ್ನು ಹುಡುಕಲು ಸಹ ವಿಲವಾಗಿದೆ. ಕಾಡಾನೆ ದಾಳಿಯಿಂದ ಇದೀಗ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಸುಶೀಲಮ್ಮ ಎಂಬ ಮಹಿಳೆ ಮೃತಪಟ್ಟಿದ್ದು ಕಳೆದ 2 ವಾರಗಳ ಹಿಂದೆ ಯುವಕನೋರ್ವ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ. ಒಟ್ಟಾರೆಯಾಗಿ ಸುಮಾರು 4 ಜನ ಜಿಲ್ಲೆಯಲ್ಲಿ ಕೇವಲ 2 ತಿಂಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಆದರೂ ಸಹ ಸರ್ಕಾರ ಯಾವುದೆ ಪರಿಹಾರವನ್ನು ಹುಡುಕಲು ವಿಲವಾಗಿದೆ. ಬಜೆಟ್‌ನಲ್ಲಿ ರೈಲ್ವೆ ಬ್ಯಾರಿಕೇಡ್ ಘೋಷಣೆ ಮಾಡಿದೆ ಆದರೆ ಅನುದಾನದ ಕುರಿತು ಸರಿಯಾಗಿ ಮಾಹಿತಿಯಿಲ್ಲ. ಭದ್ರ ಅಭಯಾರಣ್ಯ ಸಮೀಪ ಆನೆಧಾಮ ಮಾಡುವ ಯೋಜನೆಯನ್ನು ಸರ್ಕಾರ ಘೋಷಿಸಿದ್ದು ಆದರೆ ಇದಕ್ಕೆ ಯಾವ ರೀತಿ ಸಿದ್ದತೆ ನಡೆಸಿದೆ ಎಂಬುದರ ಕುರಿತು ಮಾಹಿತಿಯಿಲ್ಲ. ಅರಣ್ಯ ಇಲಾಖೆಯವರು ರೈತರು ಸೌದೆಗಳನ್ನು ಸಾಗಿಸುವಾಗ, ಮರ ಕಡಿಯುವಾಗ ಕಿರುಕುಳ ಕೊಡಲು ಸೀಮಿತವಾಗಿದ್ದು ಉನ್ನತ ಅರಣ್ಯ ಅಧಿಕಾರಿಗಳು ಕಾಡಾನೆ ಸಮಸ್ಯೆಗೆ ಯಾವುದೆ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ. ಕಾಡಾನೆ ಸಮಸ್ಯೆಗೆ ಪರಿಹಾರ ಹುಡುಕುವಂತೆ ಒತ್ತಾಯಿಸಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದಿದ್ದಾರೆ.