ಸಕಲೇಶಪುರ: ಚುನಾವಣೆ ಸಂಧರ್ಭದಲ್ಲಿ ಬಂದೂಕು ಜಮೆ ಮಾಡಿಕೊಳ್ಳುವುದರಿಂದ ರೈತ ಬೆಳೆಗಾರರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಹಾಸನದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮಲೆನಾಡಿನ ಭಾಗದಲ್ಲಿ ಒಂಟಿ ಮನೆಗಳು ಹೆಚ್ಚಾಗಿದ್ದು ರೈತರು ಬೆಳೆದ ಬೆಳೆಯನ್ನು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳಲು ಹಾಗೂ ಕಾಡುಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಬಂದೂಕಿನ ಅನಿವಾರ್ಯತೆಯಿದ್ದು ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಉಳಿದ ರೈತ ಬೆಳೆಗಾರರಿಗೆ ಬಂದೂಕು ಜಮೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಲಾಯಿತು. ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ ಚುನಾವಣಾ ಆಯೋಗವು ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾನ್ಯ ಪೋಲಿಸ್ ಪರಿಷ್ಟಾಧಿಕಾರಿಗಳನ್ನು ಒಳಗೊಂಡಂತೆ ಸಮಿತಿಯೊಂದನ್ನು ರಚಿಸಿದ್ದು, ಬಂದೂಕು ಜಮೆಯಿಂದ ವಿನಾಯಿತಿ ಕೋರುವ ರೈತ ಬೆಳೆಗಾರರು ಸಕಾರಣ ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದಲ್ಲಿ,, ಅರ್ಜಿದಾರರ ಪೂರ್ವಾಪರಗಳನ್ನು ಪರಿಶೀಲಿಸಿ,ಅವಶ್ಯಕವೆಂದು ಕಂಡು ಬಂದಲ್ಲಿ ಅಂತಹ ರೈತ ಬೆಳೆಗಾರರಿಗೆ ಬಂದೂಕು ಜಮೆಯಿಂದ ವಿನಾಯಿತಿ ನೀಡುವುದಾಗಿ ತಿಳಿಸಿರುತ್ತಾರೆ. ಈ ನಿಯೋಗದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಕೆ. ಎನ್ ಸುಬ್ರಹ್ಮಣ್ಯ , ಖಜಾಂಚಿ ಎಂ. ಎಸ್ ಚಂದ್ರಶೇಖರ್, ಜಂಟಿ ಕಾರ್ಯದರ್ಶಿಗಳಾದ ಎಂ ಸಿ ಬಸವರಾಜ್ ಹಾಗೂ ಕೆ.ಪಿ ಕೃಷ್ಣೇಗೌಡ, ನಿರ್ದೇಶಕರಾದ ಹೆಚ್.ಎಂ ರಮೇಶ್, ಕಸಬಾ ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಕೆ.ಬಿ ಲೋಹಿತ್ ,ಆಲೂರು ತಾಲೂಕು ಬೆಳಗಾರರ ಸಂಘದ ಅಧ್ಯಕ್ಷ ರವಿಕುಮಾರ್ ಹಾಜರಿದ್ದರು.