ಪ್ರೀತಿ ಯಾರಿಗೆ, ಯಾವಾಗ ಹುಟ್ಟುತ್ತೆ ಅನ್ನೋದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪ್ರಾಮಾಣಿಕ ಪ್ರೀತಿಗೆ ಬೇಕಾಗಿರುವುದು ಅಂದ-ಚಂದ, ಆಸ್ತಿ-ಅಂತಸ್ತಲ್ಲ, ಒಳ್ಳೆಯ ಮನಸ್ಸು ಎಂಬುದಕ್ಕೆ ನಿದರ್ಶನವೇ ಈ ಮದುವೆ. ಭಾರತದ ಆಟೋ ಡ್ರೈವರ್ ಒಬ್ಬ ಬೆಲ್ಜಿಯಂ ಬೆಡಗಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಇವರ ಮದುವೆ ಕಾರ್ಯಕ್ರಮ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವರ ಸನ್ನಿಧಿಯಲ್ಲಿ ನಡೆದಿದೆ.
ವಿಶ್ವವಿಖ್ಯಾತ ಹಂಪಿಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಂತೆಯೇ ಐದು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಕೆಮಿಲ್ ಎಂಬ ಯುವತಿ ತನ್ನ ಕುಟುಂಬಸ್ಥರೊಂದಿಗೆ ಹಂಪಿ ವೀಕ್ಷಣೆಗೆ ಬಂದಿದ್ದಳು. ಈ ವೇಳೆ ಇವರಿಗೆ ಗೈಡ್ ಆಗಿ ಸಂಪೂರ್ಣ ಮಾರ್ಗದರ್ಶನ ಮಾಡಿದ್ದು, ಹಂಪಿಯಲ್ಲಿ ಆಟೋ ಚಾಲನೆ ಮಾಡಿಕೊಂಡಿದ್ದ ಅನಂತರಾಜು ಎಂಬಾತ. ಈ ವೇಳೆ ಬೆಲ್ಜಿಯಂನಿಂದ ಬಂದ ಕುಟಂಬ ಅನಂತರಾಜು ಮಾರ್ಗದರ್ಶನ ಹಾಗೂ ಗುಣ ನಡತೆಗೆ ಮಾರು ಹೋಗಿದ್ದರು.
ಕೆಮಿಲ್ ಬೆಲ್ಜಿಯಂಗೆ ತೆರಳಿದ ನಂತರ ಅನಂತರಾಹು ಜತೆಗೆ ಚಾಟಿಂಗ್ ನಡೆಸುತ್ತಿದ್ದಾರು. ನಿಧಾನವಾಗಿ ಇವರಿಬ್ಬರ ಮಾತುಕಥೆ ಪ್ರೀತಿಗೆ ತಿರುಗಿದೆ. ಈ ವಿಷಯವನ್ನು ಕೆಮಿಲ್ ತನ್ನ ಹೆತ್ತವರಿಗೆ ತಿಳಿಸಿದಾಗ ಅವರಿಂದಲೂ ಒಪ್ಪಿಗೆ ಲಭ್ಯವಾಯಿತು. ಹೀಗಾಗಿ ಇವರಿಬ್ಬರೂ ಮೂರು ವರ್ಷದ ಹಿಂದೆಯೇ ವಿವಾಹವಾಗಲು ತೀರ್ಮಾನಿಸುತ್ತಾರೆ. ಆದರೆ ಕರೊನಾ ಇವರಿಬ್ಬರ ವಿವಾಹಕ್ಕೆ ಅಡ್ಡಿಯಾಗಿತ್ತು. ಇದೀಗ ಎಲ್ಲಾ ಸಂಕಷ್ಟವನ್ನು ಮೀರಿ ಈ ಪ್ರೇಮಿಗಳು ತಮ್ಮ ಆಸೆಯಂತೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವರ ಸನ್ನಿಧಿಯಲ್ಲಿ ಇಂದು(ಡಿ.25) ಬೆಳಗ್ಗೆ 9:25ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅನಂತರಾಜು ಜತೆ ಕೆಮಿಲ್ ಸಪ್ತಪದಿ ತುಳಿದಿದ್ದಾರೆ. ಇನ್ನೂ ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿದ್ದ ಕೆಮಿಲ್ ಕುಟುಂಬಸ್ಥರು ಆಕೆಯ ಒಪ್ಪಿಗೆಯ ಮೇರೆಗೆ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿ ಖುಷಿಪಟ್ಟಿದ್ದಾರೆ.