ಗುಜರಾತ್ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಮಧ್ಯಾಹ್ನ 12 ಗಂಟೆಗೆ ಚುನಾವಣಾ ದಿನಾಂಕಗಳ ವಿವರಗಳನ್ನು ಬಹಿರಂಗಪಡಿಸಲಿದೆ. ಕಳೆದ ತಿಂಗಳು ಹಿಮಾಚಲ ಪ್ರದೇಶದ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. 2017ರಲ್ಲಿ ಕೂಡಾ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಘೋಷಿಸಲಾಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿವರಿಸಿದರು. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಗುಜರಾತ್ ವಿಧಾನಸಭೆಯ ಅವಧಿ 18 ಫೆಬ್ರವರಿ 2023 ರಂದು ಕೊನೆಗೊಳ್ಳಲಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿ 8 ಜನವರಿ 2023 ರಂದು ಕೊನೆಗೊಳ್ಳಲಿದೆ. ಇದೇ ವೇಳೆ ಬಿಜೆಪಿ ಮತ್ತು ಎಎಪಿ ಮೊದಲೆರಡು ಸ್ಥಾನದಲ್ಲಿ ನಿಂತಿದ್ದು, ಗುಜರಾತ್ ವಿಧಾನಸಭೆ ಚುನಾವಣೆ ಕದನ ರೋಚಕವಾಗಿದೆ. ಬಿಜೆಪಿ, ಎಎಪಿ ಮತ್ತು ಇತರ ಪಕ್ಷಗಳು ಈಗಾಗಲೇ ಗುಜರಾತ್‌ನಲ್ಲಿ ಪ್ರಚಾರ ನಡೆಸುತ್ತಿವೆ. ಎಎಪಿ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ಗುಜರಾತ್‌ನಲ್ಲಿ ಸಭೆ ಮತ್ತು ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ತಮ್ಮ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡುವಂತೆ ಕರೆ ಸಹ ಕೊಟ್ಟಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಗುಜರಾತ್ ಈಗಾಗಲೇ ಚುನಾವಣಾ ವಾತಾವರಣವನ್ನು ಎದುರಿಸುತ್ತಿದೆ.
2017 ರಲ್ಲಿ ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಮತ್ತೊಮ್ಮೆ ಗುಜರಾತ್ ರಾಜ್ಯದಲ್ಲಿ ಸತತ ಆರನೇ ಬಾರಿಗೆ ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಉತ್ಸುಕವಾಗಿದೆ.