ವನ್ಯಜೀವಿ-ಮಾನವ ನಡುವಿನ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರೋಪ್ ಫೆನ್ಸ್ ಅಳವಡಿಕೆಯನ್ನು ಪ್ರಾಯೋಗಿಕವಾಗಿ ೫ ಕೋಟಿ ರೂ ವೆಚ್ಚದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದರು.
ನಗರದಲ್ಲಿ ಕೊಡಗು ಕಾಫಿ ಬೆಳೆಗಾರರ ಸಂಘದ ೧೪೩ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಬಜೆಟ್‌ನಲ್ಲಿ ನಿಗಧಿಪಡಿಸಿರುವ ೫ ಕೋಟಿ ರೂಗೆ ಹೆಚ್ಚುವರಿಯಾಗಿ ಮತ್ತೆ ೫ ಕೋಟಿ ರೂ ಅನುದಾನವನ್ನು ಕಾಡಾನೆ ಹಾವಳಿ ತಡೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಅಳವಡಿಸಿ ಯಶಸ್ವಿಯಾಗಿರುವ ರೋಪ್ ಫೆನ್ಸ್ ತಂತ್ರಜ್ಞಾನವನ್ನೂ ಈ ಅನುದಾನ ಬಳಸಿಕೊಂಡು ಶೀಘ್ರದಲ್ಲಿಯೇ ಪ್ರಾಯೋಗಿಕವಾಗಿ ನಾಗರಹೊಳೆಯಲ್ಲಿಯೂ ಅಳವಡಿಸಲಾಗುತ್ತದೆ. ವನ್ಯಜೀವಿಗಳಿಂದ ಕಷಿ ಜಮೀನು ಹಾನಿಗೆ ಶೇ.೧೦೦ ರಷ್ಟು ಪರಿಹಾರ ನೀಡಲು ವಾಸ್ತವ ನೆಲೆಗಟ್ಟಿನಲ್ಲಿ ಅಸಾಧ್ಯ ಎಂದು ಸ್ಪಷ್ಟಪಡಿಸಿದರು. ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ ಮೂರ್ತಿ ಮಾತನಾಡಿ, ಕಾಡಿನಲ್ಲಿ ಕಳೆದ ೧೦ ವರ್ಷಗಳಿಗೆ ಹೋಲಿಸಿದರೆ ಬಿದಿರು ಮೆಳೆ ಪ್ರಮಾಣ ಕಡಮೆಯಾಗಿರುವುದು ಕೂಡ ಕಾಡಾನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವಾಗಿದೆ. ಇದನ್ನು ನಿವಾರಿಸಲು ಕೊಡಗು ಜಿಲ್ಲೆಯಲ್ಲಿ ೧೫ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಬಿದಿರು ಸಸಿ ನೆಡಲಾಗಿದೆ. ೧ ಸಾವಿರದಷ್ಟು ಕೊಳಗಳು ಕಾಡಿನೊಳಗಿದ್ದು ಇವುಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
ಮಹಾಸಭೆಯಲ್ಲಿ ಕೊಡಗು ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಸಿ.ಯು.ಅಶೋಕ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿದೆಡೆಗಳಿಂದ ಕೊಡಗು ಬೆಳೆಗಾರರ ಸಂಘದ ಸದಸ್ಯರು ಹಾಜರಿದ್ದರು.



