ಕಾಡಾನೆ ದಾಳಿ ಪ್ರಕರಣ : ಗಾಯಳು ಕಾರ್ಮಿಕನ ಆರೋಗ್ಯ ವಿಚಾರಿಸಿದ ಶಾಸಕ ಸಿಮೆಂಟ್ ಮಂಜುನಾಥ್.
ಹಾಸನ : ಕಾಡಾಳಿ ದಾಳಿಯಿಂದ ಗಾಯಗೊಂಡು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೂಲಿ ಕಾರ್ಮಿಕ ದಿವಾಕರ್ ಅವರನ್ನು ಶಾಸಕ ಸಿಮೆಂಟ್ ಮಂಜುನಾಥ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ದಾಳಿಗೆ ಒಳಗಾಗಿರುವ ಗಾಯಳು ದಿವಾಕರ್ ಅವರಿಗೆ ಕಾಲು, ಹೊಟ್ಟೆ ಭಾಗದಲ್ಲಿ ಪೆಟ್ಟಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಗಾಯಳು ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಗಾಯಾಳುವಿನ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಬರಿಸಲಿದೆ ಎಂದು ತಿಳಿಸಿದರು.ಅವರು ಗುಣಮುಖರಾಗಲಿದ್ದು, ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕುಟುಂಬಸ್ಥರಿಗೆ ದೈರ್ಯ ತುಂಬಿದರು.
ಈ ಸಂಧರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ್, ಹಿಮ್ಸ್ ಆಸ್ಪತ್ರೆಯ ವೈದ್ಯರು, ಬಿಜೆಪಿ ಮುಖಂಡ ಕ್ಯಾಮನಹಳ್ಳಿ ರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಘಟನೆ ವಿವರ : ಸಕಲೇಶಪುರ ತಾಲೂಕಿನ ವಾಟೆಹಳ್ಳಿಯ ದಿವಾಕರ್ ಅವರು ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಿನಿಂದ ಬಂದಿದ್ದ ಒಂಟಿ ಸಲಗವು ದಾಳಿ ಮಾಡಿದೆ. ದಿವಾಕರ್ ಅವರನ್ನು ಅಟ್ಟಿಸಿಕೊಂಡು ಬಂದು ಕಾಲಿನ ಮೇಲೆ ತುಳಿದಿದೆ. ಅವರ ಬಲಗಾಲು ಮುರಿದಿದು ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿತ್ತು.ಅವರ ಕಿರುಚಾಟಕ್ಕೆ ಹೆದರಿದ ಆನೆ ಕಾಫಿ ತೋಟದ ಮೂಲಕ ವಾಪಸ್ ಹೋಗಿದೆ. ಹೀಗಾಗಿ ಅವರ ಪ್ರಾಣ ಉಳಿದಿದೆ. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. . ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ ನೆಡೆಸಿದ್ದರು.