ಸಕಲೇಶಪುರ :ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಡಿ.ವೈ.ಎಸ್ಪಿ ಮಿಥುನ್ ಬಿಸಿ ಮುಟ್ಟಿಸಿದ್ದಾರೆ.
ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಲೆಯ ಭಾಗಕ್ಕೆ ಪೆಟ್ಟಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಹಾಗೂ ನಿನ್ನೆ ರಾತ್ರಿ ಕಾಡುಮನೆ ಸಮೀಪ ಬೈಕಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು .ಈ ಹಿನ್ನೆಲೆಯಲ್ಲಿ ಸ್ವತಃ ಡಿವೈಎಸ್ಪಿ ಮತ್ತು ಅವರ ಅಧಿಕಾರಿಗಳ ತಂಡ ಫೀಲ್ಡಿಗಿಳಿದು ವಾಹನ ಸವಾರರಿಗೆ ದಾಖಲಾತಿ ಹಾಗೂ ಸೀಟ್ ಬೆಲ್ಟ್ ಸೇರಿದಂತೆ ಇನ್ನಿತರ ಸುರಕ್ಷತೆ ಇಲ್ಲದ ಸವಾರರಿಗೆ ಪಟ್ಟಣದ ಹೇಮಾವತಿ ಸೇತುವೆ ಬಳಿ ದಂಡ ವಿಧಿಸುತ್ತಿರುವುದು ಕಂಡುಬಂದಿತು.
ಈ ಸಂಧರ್ಭದಲ್ಲಿ ಡಿ.ವೈ.ಎಸ್ಪಿ ಮಿಥುನ್ ಮಾತನಾಡಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಾಗತೊಡಗಿದೆ.
ರಸ್ತೆ ಅಪಘಾತದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಪ್ರತಿ ವರ್ಷ ದೇಶದಲ್ಲಿ ಮೃತಪಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರೇ ಹೆಚ್ಚಿನ ಸಂಖ್ಯೆಯವರಾಗಿದ್ದು ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕೆಲವರು ಗೊತ್ತಿದ್ದು ನಿಯಮ ಉಲ್ಲಂಘನೆ ಮಾಡಿದರೆ ಇನ್ನು ಕೆಲವರು ಗೊತ್ತಿಲ್ಲದೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲಾರು ಅನುಸರಿಸಬೇಕು ಎಂದರು.