ಹಾಸನದ ಗಾಂಧಿಗೆ ಅಂತಿಮ ನಮನ: ಎಂ.ಕೆ. ಶಿವಣ್ಣ ಅಗಲಿಕೆ – ಶಾಸಕ ಸಿಮೆಂಟ್ ಮಂಜು ಶ್ರದ್ಧಾಂಜಲಿ
ಹಾಸನ: ಹಾಸನದ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ಹಿರಿಯ ಸ್ವಾತಂತ್ರ ಹೋರಾಟಗಾರ ಎಂ.ಕೆ. ಶಿವಣ್ಣ (93) ವಯೋಸಹಜ ಕಾಯಿಲೆಯಿಂದ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರ ನಿವಾಸಕ್ಕೆ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಶಾಸಕ ಸಿಮೆಂಟ್ ಮಂಜು, “ಶಿವಣ್ಣನವರು ಜಿಲ್ಲೆಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದು, ಅವರ ಶಿಸ್ತಿನ ಹೋರಾಟ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಅಗಲಿಕೆಯಿಂದ ಜಿಲ್ಲೆಗೆ ಅಪಾರ ನಷ್ಟವಾಗಿದೆ” ಎಂದು ಹೇಳಿದರು.
1931ರಲ್ಲಿ ಗಾಂಧೀಜಿ ಹಾಸನ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದು, ಆದರೆ ತಾವು ಗಾಂಧೀಜಿಯನ್ನು ನೇರವಾಗಿ ನೋಡುವ ಭಾಗ್ಯ ಸಿಗಲಿಲ್ಲ ಎಂಬುದು ಶಿವಣ್ಣ ಅವರ ಹೃದಯದಲ್ಲಿ ಉಳಿದ ನೋವಾಗಿತ್ತು ಎಂದು ಸ್ಮರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, “ಶಿವಣ್ಣನವರು ಹಾಸನದ ಗಾಂಧಿ ಎಂದೇ ಪ್ರಸಿದ್ಧಿಯಾಗಿದ್ದು, ಸ್ವಾತಂತ್ರ ಹೋರಾಟದ ಬಳಿಕವೂ ಹಲವಾರು ಸಂಘ–ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಹೋರಾಟ ಮತ್ತು ಸೇವೆ ನಮಗೆ ಮಾದರಿಯಾಗಿವೆ” ಎಂದು ಹೇಳಿದರು.