ಸಕಲೇಶಪುರ : ಸುಭಾಷ್ ಕ್ರೀಡಾ ಮೈದಾನವನ್ನು ಮಾದರಿ ಕ್ರೀಡಾಂಗಣ ಮಾಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸುಭಾಷ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳು ನಮ್ಮೂರಿನಲ್ಲಿದ್ದಾರೆ. ಕ್ರೀಡಾ ಸಾಧನೆಗೆ ತಯಾರಾಗಿರುವ ಪ್ರತಿಭಾವಂತ ಸಮೂಹವಿದೆ. ಇವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗುಣಮಟ್ಟದ ಕ್ರೀಡಾಸೌಲಭ್ಯ ಒದಗಿಸುವುದು ನನ್ನ ಕರ್ತವ್ಯವಾಗಿದೆ ಎಂದರು
ಕ್ರೀಡಾಂಗಣದ ಅಭಿವೃದ್ಧಿಗೆ ಸುಮಾರು ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಅನುಧಾನ ಬಿಡುಗಡೆಯಾಗಿ ಮೂವತ್ತು ಲಕ್ಷ ರೂಪಾಯಿ ವೆಚ್ಚ ಮಾಡಿ ಕಾಮಗಾರಿ ಮಾಡಲಾಗಿದೆ ಎಂದರು. ಮುಗಿದಿರುವ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದ್ದು ಇದರಿಂದ ಕ್ರೀಡೆ ಹಾಗೂ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವಾಗಿದೆ ಎಂದು ದೂರು ನೀಡಿದ್ದಾರೆ. . ಮೇಲ್ನೋಟಕ್ಕೆ ಕ್ರೀಡಾಪಟುಗಳ ದೂರು ಸರಿಯಾಗಿದೆ, ಉಳಿಕೆ ಎಂಬತ್ತು ಲಕ್ಷ ರೂಪಾಯಿಯ ಕಾಮಗಾರಿಯನ್ನು ಕ್ರೀಡಾ ಸಮಿತಿ ಮತ್ತು ಕ್ರೀಡಾಪಟುಗಳ ಅಶಯದಂತೆ ನಿರ್ಮಾಣ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣವನ್ನು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸಹಾಯಕ ನಿರ್ದೇಶಕ ಹರೀಶ್, ಲ್ಯಾಂಡ್ ಆರ್ಮಿಯ ಎಇಇ ನವ್ಯ, ಸಿಬ್ಬಂದಿ ಶಂಕರ್, ಕ್ರೀಡಾಪಟುಗಳಾದ ನಾಗೇಶ್, ಪ್ರೇಮ್, ಹೇಮಂತ್ ಗೌಡ, ಸಂತೋಷ್, ಮಧು, ದೀಪು, ಯತೀಶ ಇನ್ನಿತರರು ಇದ್ದರು.