ಹೆತ್ತೂರು ಹಾಗೂ ಹೆಬ್ಬಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಂದ ಮುಷ್ಕರ.
ಸಕಲೇಶಪುರ : ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ನಡೆಸುತ್ತಿರುವ ಬೃಹತ್ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಕಾಮಗಾರಿ ಪ್ರದೇಶದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿರುವ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರ ರವರ ಕಚೇರಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮಾತನಾಡಿ ಮಲೆನಾಡು ಭಾಗದಿಂದ ಬಯಲು ಸೀಮೆಗೆ ಸಾವಿರಾರು ಕೋಟಿ ವೆಚ್ಚದ ಯೋಜನೆಯ ಎತ್ತಿನಹೊಳೆ ಕಾಮಗಾರಿಯಿಂದ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮುಖ್ಯ ಕಚೇರಿಗೆ ರಸ್ತೆಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದೆವು. ಆದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಭಾಗದಲ್ಲಿ ಯಾವ ಪಕ್ಷಕ್ಕೆ ಜನರು ಮತ ಹಾಕುತ್ತಾರೆ ಎಂಬ ಅಂಕಿ ಅಂಶದ ಮೇಲೆ ರಸ್ತೆಗಳನ್ನು ಮಾಡಿಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಆದರಿಂದ ಮುಂದಿನ ದಿನಗಳಲ್ಲಿ ಭೇಟಿ ನೀಡುವ ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ, ಹೆಬ್ಬಸಾಲೆ ಗ್ರಾ.ಪಂ ಅಧ್ಯಕ್ಷ ಮಹೇಶ್ , ಬಿಜೆಪಿ ಹಿರಿಯ ಮುಖಂಡ ಹೆತ್ತೂರು ದೇವರಾಜ್, ಮೇಘರಾಜ್ ಎಚ್ ಎಂ ರಾಜು, ಡಿಲಾಕ್ಷ, ,ಹಳ್ಳಿಬೈಲು ನಾಗರಾಜ್, ನೇತ್ರಾವತಿ ನಾಗರಾಜ್,ಮುಂತಾದವರು ವಹಿಸಿದ್ದರು.