ಸಕಲೇಶಪುರ: ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಹೆಬ್ಬಸಾಲೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ದಿನಾಂಕ 01-12-2022ರಂದು ಪಟ್ಟಣದ ಎತ್ತಿನಹೊಳೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಎತ್ತಿನಹೊಳೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಾದ ನಡಹಳ್ಳಿ, ದೇಖ್ಲ, ಮಠದೇವರಹಳ್ಳಿ, ಗುರ್ಜನಹಳ್ಳಿ, ಕಲ್ಲಾರಹಳ್ಳಿ, ಮೀಸಲುಮನೆ, ಕುಂಬರಡಿ, ಹೆಬ್ಬಸಾಲೆ, ಗಾಣದಹೊಳೆ ಸೇರಿದಂತೆ ಹೆಬ್ಬಸಾಲೆ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಸೇರಿದರೆ ಸುಮಾರು 6000ಕ್ಕೂ ಹೆಚ್ಚು ಜನಸಂಖ್ಯೆ ಇರುತ್ತದೆ. ಬಹುತೇಕ ಎತ್ತಿನಹೊಳೆ ಸಂತ್ರಸ್ಥರು ಇಲ್ಲೆ ವಾಸವಾಗಿದ್ದು ಯೋಜನೆಗಾಗಿ ಭೂಮಿ, ನೀರು , ರಸ್ತೆ ಎಲ್ಲಾವನ್ನು ಬಿಟ್ಟುಕೊಟ್ಟಿದ್ದರು ಸಹ ಈ ಭಾಗದಲ್ಲಿ ಸರಿಯಾದ ರಸ್ತೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ವಿಫಲರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ ಎತ್ತಿನಹೊಳೆ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡ ಮೇಘರಾಜ್ ಹೇಳಿಕೆ ನೀಡಿದ್ದಾರೆ.