ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸಿದ್ದವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ತಾಲೂಕಿನ ಕುಂಬ್ರಹಳ್ಳಿ ಗ್ರಾಮದಲ್ಲಿ ಸುಶೀಲಾ ಶಿವಪ್ಪನವರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ವೇಳೆ ಶೋಭಾ ಕರಂದ್ಲಾಜೆ ಸುದ್ದಿಗಾರರು ಕಾಡಾನೆ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ಕಾಡಾನೆ ಸಮಸ್ಯೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲಾಗುತ್ತಿದೆ. ಇದೀಗ ತಜ್ಞರ ಸಮಿತಿ ಬಂದು ಜನರ ಅಭಿಪ್ರಾಯಗಳನ್ನು ಆಲಿಸಿದೆ. ರಾಜ್ಯ ಸರ್ಕಾರ ಕಾಡಾನೆ ಸಮಸ್ಯೆ ಬಗೆಹರಿಸಲು ಕೊಡುವ ಯೋಜನೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ದೇಶದ ಬೇರೆ ಬೇರೆ ಭಾಗದಲ್ಲಿ ಕಾಡು ಪ್ರಾಣಿಗಳ ಸಮಸ್ಯೆಯಿದ್ದು ಹಾಗಂತ ಕಾಡು ಪ್ರಾಣಿಗಳನ್ನು ಕೊಲ್ಲಲು ಸಾಧ್ಯವಿಲ್ಲ, ವಿವಿಧ ರಾಜ್ಯಗಳಲ್ಲಿ ಇರುವ ಸಮಸ್ಯೆಗಳ ಆಧಾರದ ಮೇಲೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುತ್ತದೆ ಎಂದರು.