ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುವ ಮತ್ತು ಅತಿ ವೈಭವದಿಂದ ಆಚರಿಸುವ ಹಬ್ಬವೇ ದೀಪಗಳ ಬೆಳಕಿನಿಂದ ಕೂಡಿದ ದೀಪಾವಳಿ. ಇದು ಐದು ದಿನಗಳವರೆಗೆ ಆಚರಿಸುವ ಹಬ್ಬ. ಜಲಪೂರ್ಣ ತ್ರಯೋದಶೀ, ನರಕಚತುರ್ದಶೀ, ಮಹಾಲಕ್ಷ್ಮೀಪೂಜೆಯ ಅಮಾವಾಸ್ಯೆ, ಬಲಿಪಾಡ್ಯ, ಯಮದ್ವಿತೀಯಾ. ಈ ಬಾರಿ ಅಮಾವಾಸ್ಯೆಯಂದು ಸೂರ್ಯಗ್ರಹಣವಿದೆ. ಸೂರ್ಯಗ್ರಹಣದಂದು ಧಾಮಿರ್ಕ ಕಾರ್ಯಗಳು ನಿಷಿದ್ಧ. ಹಾಗಾದರೆ ಲಕ್ಷ್ಮೀಪೂಜೆಯನ್ನು ಯಾವಾಗ ಮಾಡಬೇಕು? ಉತ್ತರ ಸರಳ…
ಚಾತುರ್ಮಾಸ್ಯ ಕಾಲದಲ್ಲಿ ಶಯನೀಏಕಾದಶಿಯಂದು ಭಗವಂತನು ಯೋಗನಿದ್ರೆಗೆ ಹೋಗುವನು. ಭಾದ್ರಪದ ಪರಿವರ್ತಿನೀ ಏಕಾದಶಿಯಂದು ಮಗ್ಗುಲಾಗುವನು. ಕಾರ್ತಿಕ ಶುಕ್ಲ ಪ್ರಬೋಧಿನೀ ಏಕಾದಶಿಯಂದು ಶ್ರೀ ಮಹಾಲಕ್ಷ್ಮೀಯು ಭಗವಂತನನ್ನು ಎಬ್ಬಿಸುವಳು. ಇದಕ್ಕೆ ಮೊದಲು ಅಮಾವಾಸ್ಯೆಯಂದು ನಾವು ಮಹಾಲಕ್ಷ್ಮಿಯನ್ನು ಎಬ್ಬಿಸುವ ಸಂಕೇತವಾಗಿ ಈ ಪೂಜೆ. ಈ ವರ್ಷದ ಅಮಾವಾಸ್ಯೆಯಂದು (25-10-2022) ಕೇತುಗ್ರಸ್ತ ಸೂರ್ಯಗ್ರಹಣ ಇರುವುದರಿಂದ ಅಮಾವಾಸ್ಯೆ ಲಕ್ಷ್ಮೀಪೂಜೆಯನ್ನು ಹಿಂದಿನ ದಿನವಾದ ನರಕಚತುರ್ದಶಿಯಂದು (24-10-2022) ಮಾಡಬೇಕು.