ಸಕಲೇಶಪುರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಾನುಬಾಳ್ ಗ್ರಾಮದ ಸರ್ಕಾರಿ ಪ್ರೌಡಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಮತಾ ಹರೀಶ್ ರಾವ್ ಮಾತನಾಡಿ ಗ್ರಾಮೀಣ ಭಾಗದಲ್ಲಿ 10ನೇ ತರಗತಿ ಪರೀಕ್ಷೆಯನ್ನು ಎದುರಿಸುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆ ವತಿಯಿಂದ ಉಚಿತ ಟ್ಯೂಷನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೈಗೊಂಡಿರುವ ಈ ಯೋಜನೆಯಿಂದಾಗಿ ಶಾಲೆಯ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಾಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಹಾನುಬಾಳ್ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್, ಯೋಜನಾಧಿಕಾರಿ ಪುರುಷೋತ್ತಮ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾದ ಶ್ವೇತಾ, ಸೇವಾ ಪ್ರತಿನಿಧಿ ಭವ್ಯ, ಶಿಕ್ಷಕರುಗಳಾದ ನಟರಾಜ್, ಮನೋಹರ್ ಉಪಸ್ಥಿತರಿದ್ದರು.