ಅಪಪ್ರಚಾರದಿಂದ ಭಕ್ತರ ಮನಸ್ಸಿಗೆ ಘಾಸಿ : ಶಾಸಕ ಸತೀಶ್ ರೆಡ್ಡಿ.
ಸಕಲೇಶಪುರ:ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಭಕ್ತರ ಮನಸ್ಸಿಗೆ ಘಾಸಿ ಉಂಟುಮಾಡಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಧರ್ಮಸ್ಥಳ ಸಂರಕ್ಷಣೆ ಯಾತ್ರೆ ವೇಳೆ ಸತೀಶ್ ರೆಡ್ಡಿ ಹಾಗೂ ಅವರ ಕಾರ್ಯಕರ್ತರಿಗೆ ಶಾಸಕ ಸಿಮೆಂಟ್ ಮಂಜು ಸ್ವಾಗತ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಸತೀಶ್ ರೆಡ್ಡಿ ಮಾತನಾಡಿ, “ವ್ಯವಸ್ಥಿತ ಷಡ್ಯಂತ್ರದ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾರು ಏನೇ ಪಿತೂರಿ ಮಾಡಿದರೂ ಕ್ಷೇತ್ರಕ್ಕೆ ಕಳಂಕ ತರುವುದಕ್ಕೆ ಸಾಧ್ಯವಿಲ್ಲ. ನಮ್ಮ ಧರ್ಮ ಸಂರಕ್ಷಣೆ ನಮ್ಮ ಹೊಣೆ. ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ನೂರಾರು ವಾಹನಗಳಲ್ಲಿ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ,” ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಉಲ್ಲೇಖ ಮಾಡಿ ಅವರು, “ಸಕಲೇಶಪುರದ ಶಾಸಕ ಸಿಮೆಂಟ್ ಮಂಜು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವುದು ನಿಶ್ಚಿತ. ಸಿಮೆಂಟ್ ಮಂಜು ಮತ್ತೆ ಗೆದ್ದರೆ, ಅವರಿಗೆ ಉನ್ನತ ಹುದ್ದೆ ಸಿಗುವುದು ಖಚಿತ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಬಿಜೆಪಿ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸುತ್ತಿದ್ದ ಭಕ್ತರಿಗೆ ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ಕೋರಿದರು.
ಈ ಸಂಧರ್ಭದಲ್ಲಿ ಬಿಜೆಪಿ ತಾಲ್ಲೂಕು ಮಂಡಲದ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ನಗರಾಧ್ಯಕ್ಷ ಲೋಕೇಶ್ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು