ಮುಂದುವರೆದ ಮಕ್ನ ಕಾಡಾನೆ ದಾಂದಲೆ: ಆತಂಕದಲ್ಲಿ ಬೆಳೆಗಾರರು
ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯಲ್ಲಿ ಮಕ್ನ ಕಾಡಾನೆ ದಾಂದಲೆ ಮುಂದುವರೆದಿದ್ದು ಇದರಿಂದ ಬೆಳೆಗಾರರು ಭಯಭೀತರಾಗಿದ್ದಾರೆ.
ಇಂದು ಬೆಳಿಗ್ಗೆ ತಾಲೂಕಿನ ಮಾಸವಳ್ಳಿ ಗ್ರಾಮದ ಬಸವಣ್ಣ
ಎಂಬುವರ ಮನೆಯ ಪಕ್ಕದಲ್ಲೇ ಇರುವ ಗೋಡೌನ್ ಬಾಗಿಲು ಮುರಿದು ಭತ್ತ ತಿಂದು ಭತ್ತದ ಚೀಲಗಳನ್ನೆಲ್ಲ ಚೆಲ್ಲಾಡಿ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ.ಮಕ್ನ ಕಾಡಾನೆಯು ಮನೆಗಳ ಮೇಲೆ ದಾಂದಲೆ ನಡೆಸುವುದರಿಂದ ಜನರು ಸದಾ ಭಯದಲ್ಲೆ ಇರಬೇಕಾಗಿದೆ.
ಕಳೆದ ವರ್ಷ ಇದರ ಉಪಟಳ ಹೆಚ್ಚಾಯ್ತು ಎಂದು ಅರಣ್ಯ ಇಲಾಖೆ ಹಿಡಿದು ತಮಿಳುನಾಡಿನ ಅಂಚಿನ ಕಾಡಿಗೆ ಬಿಟ್ಟು ಬಂದ ಕೆಲವೇ ದಿನಗಳಲ್ಲಿ ಹಿಂತಿರುಗಿ ಸ್ವಸ್ಥಳಕ್ಕೆ ಬಂದಿತ್ತು. ಮತ್ತೆ ಮಕ್ನ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯದಿದ್ದಲ್ಲಿ ಅಮಾಯಕರು ಬಲಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ಅರಣ್ಯ ಇಲಾಖೆ ಮಕ್ನ ಕಾಡಾನೆಯನ್ನು ಸೆರೆ ಹಿಡಿಯಬೇಕಾಗಿದೆ.