24 ವರ್ಷಗಳಲ್ಲಿ ಮೊದಲ ಗಾಂಧಿಯೇತರ ಅಧ್ಯಕ್ಷರನ್ನು ಕಾಣಲಿದೆ ಕಾಂಗ್ರೆಸ್.
ನವದೆಹಲಿ, ಅ. 17: ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. 24 ವರ್ಷಗಳಲ್ಲಿ ಮೊದಲ ಗಾಂಧಿಯೇತರ ಅಧ್ಯಕ್ಷರನ್ನು ಕಾಂಗ್ಎಸ್ ಕಾಣಲಿದ್ದು, ಗೆದ್ದವರನ್ನು ಸೋನಿಯಾ ಗಾಂಧಿ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತಿದೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಲಿರುವ ನಿರ್ಣಾಯಕ ಚುನಾವಣೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮುಖಾಮುಖಿಯಾಗಲಿದ್ದಾರೆ. ಪಕ್ಷದ 37 ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು 9,000 ಕ್ಕೂ ಹೆಚ್ಚು ಕಾಂಗ್ರೆಸ್ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ.
ದೇಶದ ಹಳೇಯ ರಾಜಕೀಯ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಆಯ್ಕೆಯಾದವರು ಪ್ರಸ್ತುತ ಮುಖ್ಯಸ್ಥೆಯಾಗಿರುವ ಸೋನಿಯಾ ಗಾಂಧಿಯವರ ಉತ್ತರಾಧಿಕಾರಿಯಾಗುತ್ತಾರೆ.
ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜಸ್ಥಾನದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ‘ಚಿಂತನ್ ಶಿವರ್’ ಘೋಷಣೆಗಳ ಹೆಜ್ಜೆಗಳನ್ನು ಅನುಸರಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಪ್ರತಿಜ್ಞೆ ಮಾಡಿದ್ದಾರೆ. ಇತ್ತ ಶಶಿ ತರೂರ್ ಅವರು ಪಕ್ಷವನ್ನು ವಿಕೇಂದ್ರೀಕರಿಸುವ ಭರವಸೆ ನೀಡಿದ್ದಾರೆ.
ಈ ಬಾರಿಯ ಚುನಾವಣಾ ಪ್ರಕ್ರಿಯೆಯಲ್ಲಿ ಗಾಂಧಿ ಕುಟುಂಬವು ತಟಸ್ಥವಾಗಿ ಉಳಿದಿದೆ. ಸೋನಿಯಾ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾವ ಅಬ್ಯರ್ಥಿಯ ಪರವಾಗಿಯೂ ಇಲ್ಲ ಎಂದು ಸ್ವತಃ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಪದೇ ಪದೇ ಹೇಳಿದ್ದಾರೆ.
ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪರಸ್ಪರ ಗೌರವಿಸುವುದಾಗಿಯೂ, ಫಲಿತಾಂಶ ಏನೇ ಬಂದರೂ ಲೆಕ್ಕಿಸದೆ ತಮ್ಮ ಪಕ್ಷದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸುವುದಾಗಿಯೂ ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಈ ಅಧ್ಯಕ್ಷೀಯ ಚುನಾವಣೆ ಪ್ರಮುಖವಾಗಿದೆ. ಪಕ್ಷ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಸಮಯದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 19ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ.