ಬೆಂಗಳೂರು: ಕಲಬೆರಕೆ ಕಾಫಿ ಪುಡಿ ಮಾರಿದ್ದ ಮಾರಾಟ ಮಾಡಿದ್ದ ಪ್ರಕರಣದ ಅಪರಾಧಿಗೆ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಶಿಕ್ಷೆ ರದ್ದು ಕೋರಿ ಸಕಲೇಶಪುರದ ‘ಸೆಲೆಕ್ಸ್ ಕಾಫಿ ವರ್ಕ್ಸ್’ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮೇಲ್ಮನವಿ ಯನ್ನು ನ್ಯಾಯಮೂರ್ತಿ ಎಚ್. ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
ಪ್ರಕರಣವೇನು?: ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದೆ ಕಾಫಿ ಪುಡಿ ಮಾರಿದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ 6 ತಿಂಗಳು ಸಜೆ ಹಾಗೂ 71 ಸಾವಿರ ದಂಡ ವಿಧಿಸಿತ್ತು.
ಈ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ಕೋರ್ಟ್ ಗೆ ಹೋಗಿ ಶರಣಾಗಿ ಶಿಕ್ಷೆ ಅನುಭವಿಸಬೇಕು’ ಎಂದು ತೀರ್ಪು ನೀಡಿದೆ.
“ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನ, ಸಸ್ಯಾಹಾರ-ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರುವುದು ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ’ ಎಂದು ನ್ಯಾಯಪೀಠ ಎಚ್ಚರಿಸಿದೆ.