ಎತ್ತಿನಹೊಳೆ ಯೋಜನೆ ಅನುದಾನ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ – ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ಮಲೆನಾಡು ಭಾಗದಿಂದ ಬಯಲು ಸೀಮಿಗೆ ಕುಡಿಯುವ ನೀರಿನ ಬೃಹತ್ ಯೋಜನೆಯಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.
ಈ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಸಿಗಬೇಕಾದ ನ್ಯಾಯಯುತ ಅನುದಾನದ ಕುರಿತು ಶಾಸಕ ಸಿಮೆಂಟ್ ಮಂಜುನಾಥ್ ಬುದುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿ, 24,000 ಕೋಟಿ ರೂಪಾಯಿಗಳ ಬೃಹತ್ ಯೋಜನೆ ಇದಾಗಿದ್ದು 2014 ರಿಂದ ಇದುವರೆಗೂ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಯೋಜನೆಯ ಕಾಮಗಾರಿಗೆ ಹಣ ಬಿಡುಗಡೆ ಮಾಡಿವೆ. ಮಲೆನಾಡು ಭಾಗದ ಜನರು ಯೋಜನೆಗೆ ಬೇಕಾದ ಭೂಮಿಯನ್ನು ಮುಕ್ತ ಮನಸ್ಸಿನಿಂದ ಸಂತೋಷದಿಂದ ನೀಡಿದ್ದಾರೆ. ಆದರೆ ಕ್ಷೇತ್ರಕ್ಕೆ ಸಿಗಬೇಕಾದ ಅನುದಾನದಲ್ಲಿ ತಾರತಮ್ಯವಾಗಿದ್ದು ಈ ಕುರಿತಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಜೊತೆಗೆ ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ವೇಳೆ ಹಲವು ಕಡೆಗಳಲ್ಲಿ ಮನೆ ರಸ್ತೆ ಸೇರಿದಂತೆ ಕಾಫಿ ತೋಟಗಳು ನಾಶವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಭೂಕುಸಿತ ಉಂಟಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ನೈಜ್ಯ ವರದಿಯ ಸಮೇತ ವಿವರಿಸಿದ್ದೇನೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕ್ಷೇತ್ರದ ಅನುದಾನದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.