ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು – ಶಾಸಕ ಸಿಮೆಂಟ್ ಮಂಜು.
ಆಲೂರು : ಪ್ರತಿ ಮನೆಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮನೆ ಮನೆಗೆ ಗಂಗೆ ಪೂರೈಕೆ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ತಾಲ್ಲೂಕಿನ ಮಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನವಿಲಹಳ್ಳಿ, ನಿಡಗರಹಳ್ಳಿ ಹಾಗೂ ಹಾರೋಹಳ್ಳಿ ಗ್ರಾಮಗಳಿಗೆ ₹ 75 ಲಕ್ಷ ವೆಚ್ಚದ ಕುಡಿಯುವ ನೀರಿನ ಪೈಪ್ ಲೈನ್ ನಿರ್ಮಾಣ ಕಾಮಗಾರಿಗೆ ಗುರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವ ಊರುಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರಿ ಸಂಪರ್ಕ ಕಲ್ಪಿಸಲಾಗುತ್ತಿದೆ. ನೀರು ಸರಬರಾಜಿನಲ್ಲಿ ಸಮಸ್ಯೆ ಇದ್ದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಪಿಡಿಒಗಳು ಈ ಬಗ್ಗೆ ನಿಗಾ ವಹಿಸಬೇಕು. ಜನರಿಂದ ದೂರು ಬರದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರೊದಗಿಸುವ ಜತೆಗೆ ಜಲ ಮೂಲಗಳನ್ನು ಕಾಪಾಡಿ, ಮುಂದಿನ ಪೀಳಿಗೆಗೆ ನೀರುಳಿಸುವುದು ಮತ್ತು ನೀರಿನ ಮಹತ್ವವನ್ನು ತಿಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಜೆಜೆಎಂ ಕಾಮಗಾರಿ ವೇಳೆ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಅಗೆದ ರಸ್ತೆಯ ಗುಂಡಿಗಳನ್ನು ಮುಚ್ಚಿ ಯಥಾಸ್ಥಿತಿ ಕಾಪಾಡಬೇಕು ಈ ಕುರಿತು ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜಯಮ್ಮ, ದೇವರಾಜ್,ಹರೀಶ್, ಯೋಗೇಶ್, ಮುಖಂಡರಾದ ಪೂವಯ್ಯ, ವಾಸುದೇವ್, ಮಹೇಂದ್ರ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಕಾವ್ಯ, ಪಿಡಿಒ ಪರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



