ಕೆಸಗಾನಹಳ್ಳಿ ರಸ್ತೆ ದುರಸ್ಥಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್.
ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪರ್ಯಾಯ ರಸ್ತೆಯಾಗಿದೆ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರ ದೋಣಿಗಾಲ್ ನಿಂದ ಕೆಸಗಾನಹಳ್ಳಿ ಮಾರ್ಗವಾಗಿ ಹೆದ್ದಾರಿ ಸಂಪರ್ಕಿಸುವ ರಸ್ತೆ ತೀರ ಹದಗೆಟ್ಟಿದ್ದು ಕೂಡಲೇ ದುರಸ್ಥಿ ಪಡಿಸುವಂತೆ ಶಾಸಕ ಸಿಮೆಂಟ್ ಮಂಜುನಾಥ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಕಳೆದ ಎರಡು ವರ್ಷಗಳಿಂದ ದೋಣಿಗಲ್ ಬಳಿ ರಸ್ತೆ ಕುಸಿತ ಉಂಟಾಗುತ್ತಿದ್ದು ಈ ಸಂಧರ್ಭದಲ್ಲಿ ಹೆದ್ದಾರಿ ಬಂದ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕೆಸಗಾನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಬಹಳ ಸಂಚಾರ ದುಸ್ತರವಾಗಿತ್ತು. ಹಾಗಾಗಿ ಮತ್ತೆ ಮಳೆಗಾಲ ಪ್ರಾರಂಭವಾಗುತ್ತಿದ್ದು ರಸ್ತೆಯನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳು ಈಗಲೇ ರಸ್ತೆಯನ್ನು ದುರಸ್ತಿ ಗಳಿಸುವಂತೆ ತಾಕೀತು ಮಾಡಿದರು.
ಹೆದ್ದಾರಿ ಸೇರಿದಂತೆ ತಾಲೂಕಿನಲ್ಲಿರುವ ರಾಷ್ಟ್ರೀಯ ರಾಜ್ಯ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದರೆ ತಕ್ಷಣದಿಂದಲೇ ದುರಸ್ತಿಕಾರ್ಯ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್, ರಜಾಕ್ ಬಜರಂಗದಳದ ರಘು ಸಕಲೇಶಪುರ ಸೇರಿದಂತೆ ಮುಂತಾದವರಿದ್ದರು.