ಸಕಲೇಶಪುರ :-ನೆಲೆ ಇಲ್ಲದೆ ಕಳೆದ ಒಂದು ವಾರದಿಂದ ಪಟ್ಟಣದ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿದ್ದ ವೃದ್ದೆಯೋರ್ವಳಿಗೆ ಬಿಜೆಪಿ ಮುಖಂಡ ಸಿಮೆಂಟ್ ಮಂಜು ದಾರಿದೀಪವಾಗಿದ್ದಾರೆ.
ಪಟ್ಟಣದಲ್ಲಿ ಸುಮಾರು 15ರಿಂದ 20 ವರ್ಷಗಳಿಂದ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪುಷ್ಪಾವತಿ (60) ಎಂಬ ಮಹಿಳೆಯನ್ನು ಇತ್ತೀಚೆಗೆ ಬಾಡಿಗೆ ಮನೆಯವರು ಖಾಲಿ ಮಾಡಿಸಿದ್ದರಿಂದ ದೇವಸ್ಥಾನದ ಮುಂಭಾಗವೇ ಆಶ್ರಯ ಪಡೆದು ಅಲ್ಲಿಯೇ ತನ್ನ ಮನೆಯ ಎಲ್ಲ ವಸ್ತುಗಳನ್ನು ಇಟ್ಟುಕೊಂಡಿದ್ದರು.
ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಮಹಿಳೆಗೆ ಅಕ್ಕ ಪಕ್ಕದ ಮನೆಯವರು ಊಟೋಪಚಾರ ಮಾಡುತ್ತಿದ್ದರು. ಗಾಳಿ ಮಳೆ ಎನ್ನದೆ ಯಾವುದೇ ಸೂರು ಇಲ್ಲದೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಜೀವನ ಸಾಗಿಸುತ್ತಿದ್ದ ಈ ಮಹಿಳೆಯನ್ನು ಕಂಡ ಸಮಾಜ ಸೇವಕ ಬಿಜೆಪಿ ಮುಖಂಡರಾದ ಸಿಮೆಂಟ್ ಮಂಜು ಅವರು ಮಹಿಳೆಯ ಆರೈಕೆ ಮತ್ತು ಶಾಶ್ವತ ಸೂರಿನಡಿಯಲ್ಲಿ ವಾಸಿಸುವಂತಾಗಲು ತೇಜೋದಯ ನಿರಾಶ್ರಿತರ ಆಶ್ರಮದ ಮುಖ್ಯಸ್ಥರನ್ನು ಸಂಪರ್ಕಿಸಿ ಅವರನ್ನು ಸಕಲೇಶಪುರಕ್ಕೆ ಕರೆಸಿ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಮಹಿಳೆಯನ್ನು ಆಶ್ರಮಕ್ಕೆ ಕಳುಹಿಸಿಕೊಟ್ಟರು. ಮಹಿಳೆಯನ್ನು ಆಶ್ರಮಕ್ಕೆ ಕಳಿಸಲು ಬೇಕಾದ ವಾಹನ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಸಿಮೆಂಟ್ ಮಂಜುರವರೇ ಒದಗಿಸಿ ಕೊಟ್ಟರು.
ಈ ಸಂಧರ್ಭದಲ್ಲಿ ತೇಜೋದಯ ನಿರಾಶ್ರಿತರ ಆಶ್ರಮದ ರವಿತೇಜ, ಪುರಸಭೆಯ ನಾಮ ನಿರ್ದೇಶನ ಸದಸ್ಯೆ ಚೇತನಾ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಇದ್ರಿಸ್, ಪಟ್ಟಣ ಠಾಣೆಯ ಪೊಲೀಸರು ಇದ್ದರು.