ಮಾಜಿ ಎಂಎಲ್ಸಿ, ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ ವಿಧಿವಶ: ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ತೀವ್ರ ಸಂತಾಪ
ಶಿವಮೊಗ್ಗ (ಜೂ.17): ಬಿಜೆಪಿಯ ಹಿರಿಯ ನಾಯಕ ಎಂ ಬಿ ಭಾನುಪ್ರಕಾಶ್ (68) ಅವರು ನಿಧನರಾಗಿದ್ದಾರೆ. ಮಾಜಿ ಎಂಎಲ್ಸಿ ಎಂಬಿ ಭಾನುಪ್ರಕಾಶ್, ಹೃದಯಾಘಾತದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಭಾನುಪ್ರಕಾಶ್ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು ಆದರೆ ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಎಂ.ಬಿ.ಭಾನುಪ್ರಕಾಶ್ ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸಿಮೆಂಟ್ ಮಂಜುನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ನಮ್ಮೆಲ್ಲ ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ. ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಎಂ ಬಿ ಭಾನುಪ್ರಕಾಶ್ ಬಿಜೆಪಿ ಸಂಘಟನೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸಮಯದಲ್ಲಿ 2019ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು. ಭಾನುಪ್ರಕಾಶ್ ಬಿಜೆಪಿಯ ಹಿರಿಯ ಮುಖಂಡ. ಸರಳ, ಸಜ್ಜನ ಎಂಬ ಹೆಗ್ಗಳಿಕೆ. ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿ. ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಕಟ್ಟಾ ಅನುಯಾಯಿಯಾಗಿದ್ದ ಭಾನುಪ್ರಕಾಶ್, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಬಂಗಾರಪ್ಪ ಎದುರು ನಿಂತಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದವರು.ಮೃತ ಭಾನುಪ್ರಕಾಶ್ ರವರ ಪುತ್ರ ಚಿನ್ಮಯಿ ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಸನ ಜಿಲ್ಲಾ ಕಾರ್ಯವಾಹಕ ಸೇವೆ ಸಲ್ಲಿಸುತ್ತಿದ್ದಾರೆ.