Saturday, November 23, 2024
Homeಸುದ್ದಿಗಳುರಾಜ್ಯBreaking: ಹಾಸನದಲ್ಲಿ ಭೀಕರ ಅಪಘಾತ, ಎಚ್‌ಡಿಕೆ ಸಂತಾಪ.

Breaking: ಹಾಸನದಲ್ಲಿ ಭೀಕರ ಅಪಘಾತ, ಎಚ್‌ಡಿಕೆ ಸಂತಾಪ.

ಬೆಂಗಳೂರು, ಅ.16: ರಾಜ್ಯದ ಜನರು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದ ಸುದ್ದಿಗೆ ಸಾಕ್ಷಿಯಾಗಿದ್ದಾರೆ. ಹಾಸನದಲ್ಲಿ ಭೀಕರ ಸರಣಿ ರಸ್ತೆ ಅಪಘಾತ ನಡೆದಿದ್ದು, ಸ್ಥಳದಲ್ಲಿಯೇ 9 ಮಂದಿ ಸಾವನ್ನಪ್ಪಿದ್ದಾರೆ. 12 ಜನರು ಗಾಯಗೊಂಡಿದ್ದಾರೆ.

ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಾಂಧಿನಗರದಲ್ಲಿ ಈ ಭೀಕರ ಅಪಘಾತ ನಡೆದಿದೆ. ಹಳ್ಳಿಕೆರೆ ಗ್ರಾಮದ 14 ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ನಡೆದಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಬಾಣಾವರ ಬಳಿ ಕಳೆದ ರಾತ್ರಿ ಹಾಲಿನ ಟ್ಯಾಂಕರ್, ಟಿಟಿ ವಾಹನ, ಕೆಎಸ್ಆರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳೂ ಸೇರಿ 9 ಜನರು ಧಾರುಣವಾಗಿ ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ, ಅತೀವ ದುಃಖ ಉಂಟು ಮಾಡಿದೆ” ಎಂದು ಸಂತಾಪ ವ್ಯಕ್ತಪಡಿಸಿದರು.

ಮೃತರೆಲ್ಲರೂ ಧರ್ಮಸ್ಥಳ ಸೇರಿ ಕೆಲ ಪುಣ್ಯಕ್ಷೇತ್ರಗಳಿಗೆ ತೆರಳಿ ದೈವದರ್ಶನ ಪಡೆದು ತಮ್ಮ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಇನ್ನು ಕೆಲ ಕಾಲವಷ್ಟೇ ಕ್ರಮಿಸಿದ್ದಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು. ಆದರೆ, ಅವರೆಲ್ಲರೂ ಅಪಘಾತದಲ್ಲಿ ಸಾವಿಗೆ ತುತ್ತಾಗಿದ್ದಾರೆ. ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಲು ಕ್ರಮ ವಹಿಸಿ, ತಕ್ಷಣ ಸಂಬಂಧಿಕರಿಗೆ ಹಸ್ತಾಂತರ ಮಾಡಬೇಕು. ಗಾಯಾಳುಗಳಿಗೆ ಉಚಿತ, ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರಿಗೆ ರಾಜ್ಯ ಬಿಜೆಪಿ ಸರಕಾರ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ಕರುಣಿಸಲಿ ಹಾಗೂ ಗಾಯಾಳುಗಳೆಲ್ಲರೂ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

ಘಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಂತಾಪ ವ್ಯಕ್ತಪಡಿಸಿದ್ದು, “ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

 

 

RELATED ARTICLES
- Advertisment -spot_img

Most Popular