ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಸಿಮೆಂಟ್ ಮಂಜು
ಸಕಲೇಶಪುರ : ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ ಎಂದು ಶಾಸಕ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜುನಾಥ್ ಹೇಳಿದರು.
ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ನಂತರ ಮಾತನಾಡಿದ ಶಾಸಕರು,
ದೆಹಲಿ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಾರಿದೀಪವಾಗಲಿದೆ. ಇದು ದೇಶಕ್ಕೆ ಸಿಕ್ಕಿರುವ ಗೆಲುವು.ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರ ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಬಿಜೆಪಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಒಂದೇ ಒಂದು ಆಪಾದನೆಯನ್ನೂ ಹೊತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ವಿರುದ್ಧ ಶೇ.40 ಕಮೀಷನ್, ಪೇ ಸಿಎಂ ಮತ್ತಿತರ ಆರೋಪ ಮಾಡಿ ಚುನಾವಣಾ ತಂತ್ರ ಹೆಣೆದಿದ್ದ ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆಯಾಗಿದೆ. ಈಗ ಅವರು ಖಾತೆ ತೆರೆದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಕೇಜ್ರಿವಾಲ್ ಪ್ರಾಮಾಣಿಕ ಅಲ್ಲ. ಭ್ರಷ್ಟ ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಳಿನ ಮುಖವಾಡ ಕಳಚಿಬಿದ್ದಿದೆ. ಕೇವಲ ನಕಾರಾತ್ಮಕ ಪ್ರಚಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ಅಂಬೇಡ್ಕರರ ಸಂವಿಧಾನ, ಜನತೆಯ ಸಂವಿಧಾನ ಗೆದ್ದಿದೆ.ಪ್ರಧಾನಿ ಮೋದಿಯವರು ನುಡಿದಂತೆ ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ. ಪ್ರಧಾನಿ ಮೋದಿಯವರು ದೂರದೃಷ್ಟಿಯುಳ್ಳ ನಾಯಕ. ಉತ್ತಮ ಆಡಳಿತದ ಮೂಲಕ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮಾತನಾಡಿ,ಬಿಜೆಪಿ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ವಿಜಭೇರಿ ಭಾರೀಸುತ್ತಿದೆ. ರಾಜಸ್ಥಾನ ಮಧ್ಯಪ್ರದೇಶ, ಹರಿಯಾಣ ಹೀಗೆ ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭೆಗಳ ಚುನಾವಣೆಯಲ್ಲೂ ಹೆಚ್ಚಿನ ಗೆಲುವು ಬಿಜೆಪಿಯ ಪಾಲಿಗೆ ಬಂದಿದೆ.ಈ ಗೆಲುವಿಗೆ ಕಾರ್ಯಕರ್ತರ ಶ್ರಮ ಪ್ರಧಾನವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರದೀಪ್, ವನಜಾಕ್ಷಿ, ರೇಖಾ ರುದ್ರಕುಮಾರ್,ಬಿಜೆಪಿ ಜಿಲ್ಲಾ ಮಾಜಿ ಕಾರ್ಯದಕ್ಷ ಜಂಬರಡಿ ಲೋಹಿತ್,ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಹಲಸುಲಿಗೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಬಬಿತ ವಿಶ್ವನಾಥ್, ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ಗೋಪಿನಾಥ್, ಹಿಂದೂಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಬಿಜೆಪಿ ಮುಖಂಡರಾದ ಲೋಹಿತ್ ಕೌಡಳ್ಳಿ,ಬಾಲರಾಜ್,ಯೋಗೇಶ್, ಶರತ್ ನವೀನ್ ಶೆಟ್ಟಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.