ಬಿಸ್ಲೆ ರಕ್ಷಿತಾರಣ್ಯಕ್ಕೆ ಚಿರತೆ ಬಿಡಲು ಅರಣ್ಯ ಇಲಾಖೆ ಯತ್ನ: ವನಗೂರು ಗ್ರಾಮಸ್ಥರ ತೀವ್ರ ಆಕ್ರೋಷ
ಸಕಲೇಶಪುರ: ಕಳೆದ ಮೂರು ನಾಲ್ಕು ದಿನಗಳ ಹಿಂದಷ್ಟೆ ಮೈಸೂರು ಭಾಗದಲ್ಲಿ ಅರಣ್ಯ ಇಲಾಖೆ ನರಹಂತಕ ಚಿರತೆಯೊಂದನ್ನು ಹಿಡಿದಿದ್ದು ಬನ್ನೇರುಘಟ್ಟ ಅಭಯಾರಣ್ಯಕ್ಕೆ ಆ ಚಿರತೆಯನ್ನು ಬಿಡುತ್ತೇವೆ ಎಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬಿಸ್ಲೆ ರಕ್ಷಿತಾರಣ್ಯದಲ್ಲಿ ಬಿಡಲು ಮುಂದಾಗಿರುವುದು ವನಗೂರು ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೆ ಚಿರತೆಯೊಂದನ್ನು ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮೈಸೂರು ಭಾಗದಲ್ಲಿ ಹಿಡಿದ ನರಹಂತಕ ಚಿರತೆಯನ್ನು ಬಿಸ್ಲೆ ರಕ್ಷಿತಾರಣ್ಯಕ್ಕೆ ರಾತ್ರೋರಾತ್ರಿ ಬಿಡಲು ಮುಂದಾದ ಅರಣ್ಯ ಇಲಾಖೆ ಕ್ರಮ ವಿರುದ್ದ ತೀವ್ರ ಆಕ್ರೋಷ ಉಂಟಾಗಿದೆ. ವನಗೂರು ಗ್ರಾ.ಪಂ ಅಧ್ಯಕ್ಷ ಸತೀಶ್ ಬೆಳ್ಳಿ ಮಾತನಾಡಿ ಈಗಾಗಲೆ ಕಾಡಾನೆಗಳ ಹಾವಳಿಯಿಂದ ನಾವು ತತ್ತರಿಸಿದ್ದೇವೆ. ಚಿರತೆಯನ್ನು ಇಲ್ಲಿಗೆ ಬಿಟ್ಟರೆ ಮತ್ತೆ ಜನವಸತಿ ಪ್ರದೇಶಕ್ಕೆ ಬಂದು ಮನುಷ್ಯರ ಮೇಲೆ ದಾಳಿ ಮಾಡುವುದರಲ್ಲಿ ಅನುಮಾನವಿಲ್ಲ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಚಿರತೆ , ಹುಲಿಯಂತಹ ಪ್ರಾಣಿಗಳನ್ನು ಇಲ್ಲಿ ಬಿಡಲಿಕ್ಕೆ ಮುಂದಾಗಬಾರದೆಂದು ಹೇಳಿದ್ದಾರೆ.
ತಾಜಾ ಸುದ್ದಿ