ಸರ್ಕಾರಿ ಆಸ್ಪತ್ರೆ ವೈದ್ಯರ ಖಾಸಗಿ ಪ್ರಾಕ್ಟಿಸ್‌ಗೆ ಬ್ರೇಕ್ ಹಾಕಲು ಬರಲಿದೆ ಬಯೋಮೆಟ್ರಿಕ್
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ನೇಮಕಗೊಂಡಿರುವವರು ಖಾಸಗಿ ಪ್ರಾಕ್ಟಿಸ್ ಮಾಡುವುದನ್ನು ತಡೆಯಲು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡುವ ಚಿಂತನೆ ಇದೆ.
ಮೈಸೂರು: ಖಾಸಗಿಯಾಗಿ ಪ್ರಾಕ್ಟಿಸ್ ಮಾಡುವ ಸರ್ಕಾರಿ ವೈದ್ಯರಿಗೆ ಕಡಿವಾಣ ಹಾಕಲು ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡುವ ಬಗ್ಗೆ ಚಿಂತನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿಯಾಗಿ ಪ್ರಾಕ್ಟಿಸ್ ಮಾಡುವ ವೈದ್ಯರಿಗೆ ಕಡಿವಾಣ ಹಾಕುವ ಆಲೋಚನೆ ಸರ್ಕಾರದ ಮಟ್ಟದಲ್ಲಿದೆ ಎಂದರು. “ಬಯೋಮೆಟ್ರಿಕ್ ಅನುಷ್ಠಾನಕ್ಕೆ ತರುತ್ತೇವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೈದ್ಯರು ಬಯೋಮೆಟ್ರಿಕ್ ಮಾಡಬೇಕು. ಅವರಿಗೆ ಜಿಯೋ ಟ್ಯಾಗ್ ನೀಡಲು ಚಿಂತನೆ ನಡೆದಿದೆ” ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕಾದ ಅವಧಿಯಲ್ಲಿ ಅಲ್ಲಿರಬೇಕು ಎಂದ ಸುಧಾಕರ್, ಕರ್ತವ್ಯದ ಅವಧಿ ಮುಗಿದ ಬಳಿಕ ಪ್ರಾಕ್ಟಿಸ್ ಮಾಡಲು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತೇವೆ ಎಂದು ವಿವರಿಸಿದರು.
ಕರ್ತವ್ಯದ ಅವಧಿಯಲ್ಲಿ ಖಾಸಗಿಯಾಗಿ ಪ್ರಾಕ್ಟಿಸ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವೈದ್ಯರ ದಕ್ಷತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವೈದ್ಯರ ಖಾಸಗಿ ಪ್ರಾಕ್ಟಿಸನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಚಿಂತನೆಯಲ್ಲಿದ್ದೇವೆ ಎಂದು ಸುಧಾಕರ್ ಹೇಳಿದ್ದಾರೆ.
ವರ್ಷಾಂತ್ಯಕ್ಕೆ ಆರೋಗ್ಯ ಕಾರ್ಡ್
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ 4 ಕೋಟಿ 80 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ಕಾರ್ಡನ್ನು ಡಿಸೆಂಬರ್ ವೇಳೆಗೆ ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಸುಧಾಕರ್ ತಿಳಿಸಿದರು.