ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಸಾರ್ವಜನಿಕರಿಗಿಲ್ಲ ನಾಳೆ ಹಾಸನಾಂಬೆ ದರ್ಶನ
ವರ್ಷಕ್ಕೊಮ್ಮೆ ಬಾಗಿಲು ತೆರಯುವ ಹಾಸನಾಂಬೆ ದರ್ಶನ ಭಾಗ್ಯ ಮಂಗಳವಾರ ಸಿಗುವುದಿಲ್ಲ. ಕೇತುಗ್ರಸ್ತ ಸೂರ್ಯಗ್ರಹಣ ಇರುವುದರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಅರ್ಚಕ ನಾಗರಾಜು ಮಾಹಿತಿ ನೀಡಿದ್ದಾರೆ.
ಹಾಸನ: ಹಾಸನಾಂಬೆ ದರ್ಶನೋತ್ಸವ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ದೀಪಾವಳಿ ಹಬ್ಬ ರಜೆ ಇದ್ದು ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಆದರೆ, ಮಂಗಳವಾರ (ಅ.25) ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕಾರಣದಿಂದಾಗಿ ಸೋಮವಾರ ಮತ್ತು ಬುಧವಾರ ಮಾತ್ರ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅಲ್ಲದೆ, ಕೊನೆಯ ದಿನವೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.