ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ವಿಕೋಪಕ್ಕೆ ತೆರಳಿದ್ದು ಉದ್ರಿಕ್ತ ಜನರು ಶಾಸಕರಿಗೇ ಹೊಡೆದು ಅಂಗಿ ಹರಿದು ಹಾಕಿದ ಪ್ರಸಂಗ ನಡೆದಿದೆ. ಮಾತ್ರವಲ್ಲ, ಶಾಸಕರು ಕತ್ತಲಲ್ಲಿ ಹರಿದ ಬಟ್ಟೆಯಲ್ಲೇ ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ.
ಕಾಡಾನೆಯಿಂದ ಮಹಿಳೆ ಸಾವಿಗೀಡಾದ ಪ್ರದೇಶಕ್ಕೆ ತೆರಳಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಅವರ ಬಟ್ಟೆಯನ್ನೂ ಹರಿದು ಹಾಕಿದೆ. ಅಲ್ಲಿಂದ ಕೊನೆಗೂ ಅವರನ್ನು ಹರಸಾಹಸಪಟ್ಟು ಪೊಲೀಸರು ರಕ್ಷಿಸಿ ಕರೆದೊಯ್ದಿದ್ದಾರೆ.
ನಡೆದ ಘಟನೆ ಬಗ್ಗೆ ಶಾಸಕ ಕುಮಾರಸ್ವಾಮಿ ಹರಿದ ಬಟ್ಟೆಯಲ್ಲಿ ಹೇಳಿಕೆ ನೀಡಿದ್ದಾರೆ. ಬೇಕು ಅಂತ ಗುಂಪುಗೂಡಿ ಹಲ್ಲೆ ಮಾಡಿದ್ದಾರೆ. ನಾನು ಅಲ್ಲೇ ಇರುತ್ತಿದ್ದೆ, ನನ್ನನ್ನು ಪೊಲೀಸರು ಮಿಸ್‌ಗೈಡ್ ಮಾಡಿ ಹೊರಗೆ ಕಳಿಸಿದ್ದರು ಎಂದಿರುವ ಶಾಸಕರು, ಪೊಲೀಸರ ವೈಫಲ್ಯ ಎಂದೂ ಹೇಳಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನರು ಹೊಡೆದು ಕಳುಹಿಸಿದ್ದಾರೆ. ಕೋರ್ಟ್, ಸರ್ಕಾರ ಏನು ಹೇಳುತ್ತದೆ ಎನ್ನುವುದು ರಾಜ್ಯಕ್ಕೆ-ದೇಶಕ್ಕೆ ಗೊತ್ತಿದೆ. ಅದಾಗ್ಯೂ ಸಂಚು ಮಾಡಿ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರ ಸೇವೆ ಮಾಡುವವರು ಎಲ್ಲ ತಾಗ್ಯಕ್ಕೂ ಸಜ್ಜಾಗಿರ್ತೀವಿ ಎಂದೂ ಅವರು ಹೇಳಿದ್ದಾರೆ. ಮೂಡಿಗೆರೆ ತಾಲೂಕಿನ ಹುಲ್ಲೇಮನೆಯಲ್ಲಿ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಒಳಗಾಗಿಮೃತಪಟ್ಟಿದ್ದಾರೆ. ಈ ಹಿಂದೆಯೂ ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದು, ಆಗ ಉದ್ರಿಕ್ತ ಸಾರ್ವಜನಿಕರು ಪೊಲೀಸ್ ಜೀಪ್ ಅಲುಗಿಸಿದ್ದರು. ಈ ಸಲ ಶಾಸಕರ ಮೇಲೇ ಹಲ್ಲೆ ಮಾಡಿದ್ದಾರೆ. ಶಾಸಕರನ್ನು ವಾಪಸ್ ಕರೆದೊಯ್ಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಲೆ ಮೇಲೆ ಕೈ ಇಟ್ಟುಕೊಂಡು ಪೊಲೀಸ್ ಜೀಪ್‌ನಲ್ಲಿ ಶಾಸಕರು ಹೋಗುವಂತಾಗಿತ್ತು. ಆದರೂ ಬೆಂಬತ್ತಿದ ಜನರು ಪೊಲೀಸ್ ಜೀಪ್ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದೂ ನಡೆದಿದೆ.