ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಮತ್ತಷ್ಡು ಕ್ರಮ ಎಸ್ಪಿ ಹರಿರಾಮ್ ಶಂಕರ್
ಸಕಲೇಶಪುರ :- ಮಹಿಳೆ ಮತ್ತು ಯುವತಿಯರು, ಜನಸಾಮಾನ್ಯರು ನಿರ್ಭೀತಿಯಿಂದ ಓಡಾಡಬೇಕು, ಯಾವುದೇ ಸಮಸ್ಯೆ ಇದ್ದರೂ, ಠಾಣೆಗೆ ಬಂದಾಗ ಸೌಜನ್ಯಯುತವಾಗಿ ಸಮಸ್ಯೆ ಆಲಿಸಿ ಸ್ಪಂದಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ, ಠಾಣೆಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಬುಧವಾರ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಪ್ರತಿ ಪೊಲೀಸ್ ಠಾಣೆಯಲ್ಲೂ ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಮಹಾ ನಿರ್ದೇಶಕರ ಆದೇಶದಂತೆ ಜಿಲ್ಲೆಯ ಪ್ರತಿ ಠಾಣೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಠಾಣೆಯಲ್ಲಿ ವರಿಷ್ಠಾಧಿಕಾರಿಗಳು, ಸಹಾಯಕ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನಾಮಫಲಕದಲ್ಲಿ ಅಳವಡಿಸಿವಂತೆ ಈಗಾಗಲೇ ಸೂಚನೆ ನೀಡಿದ್ದೇನೆ.
ಪ್ರತಿ ಪೊಲೀಸ್ ಠಾಣೆಯಲ್ಲೂ ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಬೇಕು, ದೂರು ರಹಿತವಾಗಿ ನೊಂದವರಿಗೆ ಸ್ಪಂದಿಸಬೇಕು. ಒಂದು ವೇಳೆ ದೂರು ಪಡೆಯಲು ವಿಳಂಬ ನೀತಿ ಅನುಸರಿಸಿದರೆ ಹಾಗೂ ಸೂಕ್ತವಾಗಿ ಸ್ಪಂದನೆ ನೀಡದಿದ್ದರೆ ಠಾಣೆಯಲ್ಲಿ ಅಳವಡಿಸಿರುವ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಬಹುದು.
ಸ್ಥಳೀಯವಾಗಿ ಕೆಲವೊಂದು ಸಮಸ್ಯೆಗಳಿದ್ದು ಮರಳು ಗಣಿಗಾರಿಕೆ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕೆಂಬುದನ್ನು ಸಿಬ್ಬಂದಿಗಳಿಗೆ ತಿಳಿಸಲಾಗಿದೆ.
ಬಹು ಮುಖ್ಯವಾಗಿ ನಗರದ ಬಿ.ಎಂ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮದವರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗಿದ್ದು ಸುಗಮ ಸಂಚಾರಕ್ಕೆ ಅನುಸರಿಸಬೇಕಾದ ಕಮಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ಫೋನ್ ಕಳ್ಳರ ಹೆಡೆಮುರಿ ಕಟ್ಟಲು, ಕೇಂದ್ರ ಗೃಹ ಇಲಾಖೆ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ವ್ಯವಸ್ಥೆಯನ್ನು ಪೊಲೀಸ್ ಜಾರಿಗೊಳಿಸಿದೆ . ಈ ವಿನೂತನ ತಂತ್ರಜ್ಞಾನದಿಂದ ಈಗಾಗಲೇ ಹಲವಾರು ಫೋನ್‌ಗಳನ್ನು ಪತ್ತೆ ಹಚ್ಚಲಾಗಿದೆ. ಫೋನ್ ಕಳೆದುಕೊಂಡ ಸಂತ್ರಸ್ತ ತಕ್ಷಣ ಸಿಇಐಆರ್ ಪೋರ್ಟೆಲ್‌ನಲ್ಲಿ ದೂರು ದಾಖಲಿಸಿದರೆ ಸುಲಭವಾಗಿ ಪತ್ತೆ ಹಚ್ಚ ಬಹುದು. ಈ ಕುರಿತಂತೆ ರಾಣೆಯಲ್ಲಿ ಮಾಹಿತಿ ಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.
ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಎಫ್.ಟಿ.ವಿ.ಆರ್. ತಂತ್ರಜ್ಞಾನ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲಾಗುತ್ತಿದೆ.ಸಂಚಾರ ಪೊಲೀಸರು ವಾಹನ ತಪಾಸಣೆಯನ್ನು ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದ ವ್ಯವಸ್ಥೆಯಿಂದ ಆಗುತ್ತಿದ್ದ ಸಮಯ, ವೆಚ್ಚ ಮತ್ತು ಪೊಲೀಸರೊಂದಿಗಿನ ವಾಗ್ವಾದ, ಇತರೆ ಘರ್ಷಣೆಗಳನ್ನು ತಪ್ಪಿಸುವಂತಹ ಮೂಲ ಉದ್ದೇಶವನ್ನು ಇಟ್ಟುಕೊಂಡು ಸಂಚಾರ ನಿಯಮ ಉಲ್ಲಂಘಿಸುವವರ, ಉಲ್ಲಂಘನೆಗಳ ಚಿತ್ರವನ್ನು ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದು ಅಂತಹ ವಾಹನಗಳ ಮಾಲೀಕರಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ದಂಡ ಸಂಗ್ರಹಿಸುವ ವ್ಯವಸ್ಥೆಯು ಅಸ್ತಿತ್ವ್ವಕ್ಕೆ ಬಂದು ಅನುಷ್ಠಾನದಲ್ಲಿದೆ ಎಂದು ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧಿಕಾರಿ ಎಚ್.ಎನ್ ಮಿಥುನ್, ನಗರ ಠಾಣಾ ಪಿಎಸ್ಐ ಕೃಷ್ಣಪ್ಪ ಉಪಸ್ಥಿತರಿದ್ದರು.