ಆಲೂರಿನಲ್ಲಿ ಅಮಿತ್ ಷಾ ಬೃಹತ್ ರೋಡ್ ಶೋ: ಅಭಿಮಾನಿಗಳಿಗೆ ಹೂ ಎರಚಿದ ಕೇಂದ್ರ ಗೃಹ ಸಚಿವ
ಆಲೂರು: ಜೆಡಿಎಸ್ ಪಕ್ಷಕ್ಕೆ ಹಾಕುವ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹಾಕಿದಂತೆ. ಮತದಾರರು ಎಚ್ಚರ ವಹಿಸಿ ಬಿಜೆಪಿ ಪಕ್ಷಕ್ಕೆ ಮಾತ್ರ ಮತ ನೀಡಿ. ಪ್ರಧಾನ ನರೇಂದ್ರ ಮೋದಿಜಿಯವರ ಕೈ ಬಲಪಡಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರವರು ಕರೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಮದ್ಯಾಹ್ನ ರೋಡ್ ಶೋ ನಡೆಸಿದ ಬಳಿಕ ಬಿಕ್ಕೋಡು ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷವಾಗಿದೆ. ಅದು ಕಾಂಗ್ರೆಸ್ ಪಕ್ಷ ಜೊತೆಗೆ ಸಹವಾಸ ಬೆಳೆಸಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಯುವ ಅಭ್ಯರ್ಥಿ ಸಿಮೆಂಟ್ ಮಂಜು ರವರನ್ನು ಬಹುಮದಿಂದ ಗೆಲ್ಲಿಸಬೇಕು.
ಹಾಸನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತಂ ಜೆ ಗೌಡರವರನ್ನು ಜಿಲ್ಲೆಯಿಂದ ಓಡಿಸುತ್ತೇವೆ ಎಂದು ಜೆಡಿಎಸ್ ಪಕ್ಷ ಕುಟುಂಬ ಸಮೇತ ಬಂದು ಪಣ ತೊಟ್ಟಿದೆ. ಪ್ರೀತಂ ಜೆ. ಗೌಡ ರವರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಪಕ್ಷ ಗೆಲ್ಲಲಿದೆ. ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಮೋದಿಜಿ ರವರ ಕೈ ಬಲಪಡಿಸಬೇಕು.
ಬೊಮ್ಮಾಯಿ ಸರ್ಕಾರದಲ್ಲಿ ಮುಸ್ಲಿಂ ಮೀಸಲಾತಿ ತೆಗೆದಿರುವುದನ್ನು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ಪುನ: ವಾಪಾಸು ನೀಡುತ್ತೇವೆ ಎಂದಿರುವುದು ಹಾಸ್ಯಾಸ್ಪದವಾಗಿದೆ. ಒಕ್ಕಲಿಗರು, ಲಿಂಗಾಯಿತರು, ಪ. ಜಾತಿ/ವರ್ಗದವರಿಂದ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡಲು ಸಾಧ್ಯವೆ ಎಂದು ಪ್ರಶ್ನಿಸಿದರು. ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಮತವನ್ನು ವೇಸ್ಟ್ ಮಾಡಿಕೊಳ್ಳಬೇಡಿ ಎಂದರು.
ಅಮಿತ್ ಷಾ ರವರು ಮಧ್ಯಾಹ್ನ 2.30 ಕ್ಕೆ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಹೆಲಿಪ್ಯಾಡ್ಗೆ ಬಂದಿಳಿದರು. ಸ್ಥಳದಲ್ಲಿ ಹಾಜರಿದ್ದ ಬಿಜೆಪಿ ಮುಖಂಡರು ಸ್ವಾಗತಿಸಿದರು. ಊಟ ಸವಿದ ನಂತರ 3ಗಂಟೆಯಿಂದ ಮುಕ್ಕಾಲು ಗಂಟೆ ರೋಡ್ ಶೋ ನಡೆಸಿ, ಬಿಕ್ಕೋಡು ವೃತ್ತದಲ್ಲಿ ಸಾರ್ವಜನಿಕವಾಗಿ ಮಾತನಾಡಿ ವಾಪಾಸು ಹೊರಟರು.
ಎಡಿಜಿಪಿ ಅಲೋಕ್ಕುಮಾರ್, ಐಜಿ ಮಧುಕರ್ ಪ್ರವೀಣ್ಸೂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಸಕಲೇಶಪುರ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಎಚ್. ಎನ್. ಮಿಥುನ್, ಜಿಲ್ಲೆಯ ಎಲ್ಲ ಡಿವೈಎಸ್ಪಿಗಳು, ಪಿಐ ಗಂಗಾಧರ್ ಮತ್ತು ಸಿಬ್ಬಂದಿಗಳು ಹಾಜರಿದ್ದು ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ರೋಡ್ ಶೋ ನಡೆಯುವ ವೇಳೆಯಲ್ಲಿ ತೆರೆದ ವಾಹನದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ,ಶಾಸಕ ಪ್ರೀತಮ್ ಜೆ ಗೌಡ, ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್, ಬೇಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಮಾಜಿ ಶಾಸಕರುಗಳಾದ ಬಿ.ಆರ್ ಗುರುದೇವ್, ಎಚ್.ಎಂ ವಿಶ್ವನಾಥ್, ಸೇರಿದಂತೆ ಇತರರು ಹಾಜರಿದ್ದರು.