ಬೆಂಗಳೂರು :- ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಷಯವೇನೆಂದರೆ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರತಿಷ್ಟಿತ ಫಿಲಂಪೇರ್ ಸೌತ್ 2022 ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ವಿಭಾಗದಲ್ಲಿ ಆಕ್ಟ್ 1978 ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ, ರಾಜ್ ಬಿ ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬಡವಾ ರ್ಯಾಸ್ಕರಲ್ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ, ಆಕ್ಟ್ 1978 ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ, ಅದೇ ಸಿನಿಮಾದ ನಟನೆಗಾಗಿ ಬಿ. ಸುರೇಶ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರತ್ನನ್ ಪ್ರಪಂಚ ಸಿನಿಮಾದಲ್ಲಿನ ನಟೆನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿವೆ.
ಅಲ್ಲದೇ ವಾಸುಕಿ ವೈಭವ್ ಅವರಿಗೆ ಅತ್ಯುತ್ತಮ ಮ್ಯೂಸಿಕ್ ಅಲ್ಬಂ ಪ್ರಶಸ್ತಿ (ಬಡವಾ ರ್ಯಾಸ್ಕಲ್), ಜಯಂತ್ ಕಾಯ್ಕಿಣಿ ಅವರಿಗೆ ಅತ್ಯುತ್ತಮ ಗೀತ ರಚನೆ (ಲಿರಿಕ್ಸ್) ಪ್ರಶಸ್ತಿ (ತೇಲದು ಮುಗಿಲೇ – ಆಕ್ಟ್ 1978), ರಘು ದೀಕ್ಷಿತ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ (ಮಳೆಯೇ ಮಳೆಯೇ ಮಳೆಯೇ- ನಿನ್ನ ಸನಿಹಕೆ), ಅನುರಾಧಾ ಭಟ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿವೆ. ಹಾಗೆಯೇ ವಿಮರ್ಶಕರ ಅತ್ಯುತ್ತಮ ನಟಿಯಾಗಿ ಅಮೃತಾ ಅಯ್ಯಂಗಾರ್, ಮತ್ತು ಮಿಲನಾ ನಾಗರಾಜ್, ವಿಮರ್ಶಕರ ಅತ್ಯುತ್ತಮ ನಟರಾಗಿ ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್) ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಕೋರಿಯೋಗ್ರಫಿ ಪ್ರಶಸ್ತಿಗೆ ಯುವರತ್ನ ಸಿನಿಮಾದ ನೃತ್ಯ ಸಂಯೋಜನೆಗಾಗಿ ಜಾನಿ ಮಾಸ್ಟರ್ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ರತ್ನನ್ ಪ್ರಪಂಚ ಸಿನಿಮಾಕ್ಕಾಗಿ ಶ್ರೀಷ ಕೂದುವಳ್ಳಿ ಪಡೆದಿದ್ದಾರೆ. ಅತ್ಯುತ್ತಮ ಡೆಬ್ಯು ಫೀಮೇಲ್ ಪ್ರಶಸ್ತಿಯನ್ನು ಧನ್ಯ ರಾಮ್‌ಕುಮಾರ್ ನಿನ್ನ ಸನಿಹಕೆ ಚಿತ್ರಕ್ಕೆ ಪಡೆದಿದ್ದಾರೆ.