ಬೆಂಗಳೂರು: ಮೊಟ್ಟೆ ಎಸೆದರೆ ವೀರರು ಶೂರರು ಆಗುತ್ತೀರಾ? ಎಂದು ವಿಧಾನಸಭೆಯಲ್ಲಿ ಮಂಗಳವಾರ ಬಿಜೆಪಿ ಸದಸ್ಯರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.
ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊಡಗು ಜಿಲ್ಲಾಧಿಕಾರಿ ಕಚೇರಿ ಬಳಿ 7.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತಡೆಗೋಡೆ ಕಳಪೆ ಕಾಮಗಾರಿಯಿಂದ ಬೀಳುವ ಹಂತದಲ್ಲಿದೆ ಎಂದು ನೋಡಲು ನಾನು ಹೋದ ಸಂದರ್ಭದಲ್ಲಿ ನನ್ನ ವಾಹನದ ಮೇಲೆ ಮೊಟ್ಟೆ-ಕಲ್ಲು ಎಸೆದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಿಷ್ಕ್ರಿಯವಾಗಿ ನಿಂತಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಮಾಧ್ಯಮಗಳಲ್ಲಿ ಇದಕ್ಕೆ ಬೇರೆ ಏನೋ ಕಾರಣ ಎಂದು ವರದಿಗಳು ಬಂದಿದ್ದವು ಎಂದರು. ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಅಪ್ಪಚ್ಚು ರಂಜನ್, ಮೊಟ್ಟೆ ಎಸೆಯುವುದನ್ನು ನಾವು ಸಮರ್ಥಿಸುವುದಿಲ್ಲ. ಆದರೆ, ಮೊಟ್ಟೆ ಹೊಡೆದದ್ದು ನಿಮ್ಮ ಪಕ್ಷದವರು ಎನ್ನುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರ ಹಾಕಿ ತರಾಟೆ ತೆಗೆದುಕೊಂಡರು. ಈ ವೇಳೆ ಆಡಳಿತ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕೆಲ ಕಾಲ ವಾಕ್ಸಮರ ನಡೆಯಿತು.
ಮೊಟ್ಟೆ ಹೊಡೆದವರು ನಮ್ಮ ಪಕ್ಷದವರಾಗಿದ್ದರೆ ನೀವು ಯಾಕೆ ಹೋಗಿ ಅವರನ್ನು ಬಿಡಿಸಿಕೊಂಡು ಬಂದದ್ದು ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಅಪ್ಪಚ್ಚು ರಂಜನ್ನೇ ಇದನ್ನು ಮಾಡಿಸಿದ್ದು. ನನಗೆ ಇದರ 10ರಷ್ಟು ಮಾಡಲು ಬರುತ್ತೆ. ಆದರೆ ಅದಕ್ಕೆ ಹೋಗಲ್ಲ. ನೀವೇನು ಕೊಡಗಿಗೆ ಪಾಳೆಗಾರರೇ? ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲ ನಾವು ಹೆದರುವ ಮಕ್ಕಳಲ್ಲ. ಮೊಟ್ಟೆ ಎಸೆದರೆ ನೀವೇನು ಶೂರರು, ವೀರರು ಆಗುತ್ತೀರಾ? ನಾನು ಇಡೀ ರಾಜ್ಯದಲ್ಲಿ ಬೇಕಾದರೆ ಮೊಟ್ಟೆ ಹೊಡೆಸುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಕೆ.ಜಿ.ಬೋಪಯ್ಯ, ಟಿಪ್ಪು ಜಯಂತಿ ಆಚರಣೆ, ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ಕೊಡಗಿನ ಜನ ನಿಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು. ಸಿದ್ದರಾಮಯ್ಯ ಮಾತನಾಡಿ, ಟಿಪ್ಪು ಸುಲ್ತಾನ್ ಪುಸ್ತಕಕ್ಕೆ ಮುನ್ನುಡಿ ಬರೆದದ್ದು ಯಾರು? ಟಿಪ್ಪು ಪೇಟ ಧರಿಸಿ, ಕೈಯಲ್ಲಿ ಖಡ್ಗ ಹಿಡಿದುಕೊಂಡು ಫೋಸ್ ಕೊಟ್ಟಿದ್ದು ಯಾರು? ಬಿಜೆಪಿಯ ಮುಖ್ಯಮಂತ್ರಿಗಳೆ ಅಲ್ಲವೇ? ಎಂದು ತಿರುಗೇಟು ನೀಡಿದರು.