ಬೆಂಗಳೂರು: ಎಲ್ಲಿಯವರೆಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇರ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಪಥ ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಬಿಎಸ್ವೈ, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ನಿಮ್ಮ ಆಸೆ ಈಡೇರಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರುಗಳು ತಾವು ಅಧಿಕಾರಕ್ಕೆ ಬಂದೇ ಬಿಟ್ವಿ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲೀವರೆಗೆ ಪ್ರದಾನಿಯಾಗಿ ಮೋದಿ ಇರ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಅಧಿಕಾರ ಸಿಗಲ್ಲ ಎಂದರು.
ಇನ್ನು ಸಚಿವ ಸುಧಾಕರ್ರನ್ನು ಹಾಡಿಹೊಗಳಿದ ಯಡಿಯೂರಪ್ಪ, ಈ ಭಾಗದಲ್ಲಿ ಬಿಜೆಪಿ ಅಷ್ಟೊಂದು ಶಕ್ತಿಯುತವಾಗಿ ಬೆಳೆಯದ ಸಂದರ್ಭದಲ್ಲಿ ಸುಧಾಕರ್ ನೇತೃತ್ವದಲ್ಲಿ ಲಕ್ಷಾಂತರ ಜನ ಇಲ್ಲಿ ಸೇರಿದ್ದೀರಾ. ಸುಧಾಕರ್ರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆದ್ದು, ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೆ. ಇಲ್ಲಿ ನೇಕಾರರ ಸಂಖ್ಯೆ ಹೆಚ್ಚಿದೆ, ನೇಕಾರರು ನನ್ನ ಕಣ್ಣಿದ್ದಂತೆ ಎಂದು ನಾನು ಅಧಿಕಾರಕ್ಕೆ ಬಂದ ವೇಳೆ ಹೇಳಿದ್ದೆ. ರೈತರಿಗೆ ನಮ್ಮ ಸರ್ಕಾರ ನೀಡಿದಷ್ಟು ಕೊಡುಗೆ ಬೇರೆ ಯಾರೂ ಮಾಡಿಲ್ಲ ಎಂದು ಬಿಎಸ್ವೈ ಹೇಳಿದರು.
ರಾಹುಲ್ ಗಾಂಧಿ ಅವರು ಈಗ ಬಡವರ ಬಗ್ಗೆ ಮಾತಾಡ್ತಾರೆ. ಅವರ ಮನೆಯಲ್ಲಿ ಮೂವರು ಪ್ರಧಾನಿಯಾಗಿದ್ದರು. ಆದರೆ ಅವರೆಲ್ಲ ಬಡತನ ನಿವಾರಣೆ ಮಾಡಿದ್ರೇನು? ನಮ್ಮ ಪ್ರಧಾನಿ ಬಡವರ ಪರ ಕೆಲಸ ಮಾಡ್ತಿದ್ದಾರೆ ಎಂದ ಬಿಎಸ್ವೈ, ಸಿದ್ದರಾಮಯ್ಯನವರು ಬೋಟ್ನಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳ್ತಾರೆ. ಸಿದ್ದರಾಮಯ್ಯನವರೇ ನೀವು ಸಿಎಂ ಆದವರು. ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗಿದ್ದು ನಿಮಗೆ ಅರಿವಿಲ್ಲವೆ? ಇದಕ್ಕೆಲ್ಲ ಅಧಿವೇಶನದಲ್ಲಿ ಉತ್ತರ ಕೂಡ್ತೇವೆ ಎಂದರು.
ಈ ಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಬಿಜೆಪಿ ಮತ್ತು ಪ್ರಧಾನಿ ಅವರ ಬಗ್ಗೆ ಎಷ್ಟು ನಂಬಿಕೆ ಇಟ್ಟಿದ್ದೀರಾ ಎಂದು ಗೊತ್ತಾಗುತ್ತೆ. ಇಂತಹ ಜನಬೆಂಬಲ ನೋಡಿದ್ರೆ ನಮ್ಮ ಸರ್ಕಾರದ ಜನಪ್ರಿಯತೆ ತಿಳಿಯುತ್ತೆ ಎಂದರು.