ಸಕಲೇಶಪುರ: ಭೂ ಸಂಭಂಧಿತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕರ್ನಾಟಕ (ರಿ) ವತಿಯಿಂದ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಚ್.ಕೆ ಕುಮಾರಸ್ವಾಮಿ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು ಸಹ ಪ್ರತಿಭಟನಕಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲು ಮುಂದಾಗಲಿಲ್ಲ. ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ ಕೆಲವು ಸಮಸ್ಯೆಗಳು ರಾಜ್ಯಮಟ್ಟದ ಸಮಸ್ಯೆಯಾಗಿದ್ದು ಇನ್ನು ಕೆಲವು ಸಮಸ್ಯೆಗಳು ಸ್ಥಳೀಯ ಸಮಸ್ಯೆಗಳಾಗಿದೆ. ಸಾಗುವಳಿದಾರರನ್ನು ವಿನಾಕಾರಣ ತೆರವುಗೊಳಿಸುವುದಿಲ್ಲ ಎಂದರು. ಜಮೀನು ಮಂಜೂರಾತಿ ಕಾನೂನು ಪ್ರಕ್ರಿಯೆಗಳಿಂದ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಇದಕ್ಕೆ ಆಕ್ರೋಷ ವ್ಯಕ್ತಪಡಿಸಿದ ಪ್ರತಿಭಟನಕಾರರು ಒಟ್ಟು 300 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಕನಿಷ್ಠ ಸುಲಭದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಕೆಲವು ಸಮಸ್ಯೆಗಳನ್ನು ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ವಳಲಳ್ಳಿ ವೀರೇಶ್, ತಾಲೂಕು ಸಂಚಾಲಕ ಮೋಹನ್ ಕುಮಾರ್ ಅಚ್ಚರಡಿ, ಬೆಳಗೋಡು ಬಸವರಾಜು ಮುಂತಾದವರು ಹಾಜರಿದ್ದರು.