ಇಂದಿನಿಂದ ಸಕಲೇಶಪುರದ ಸುಭಾಷ್ ಮೈದಾನದಲ್ಲಿ ರಾಜ್ಯ ಮಟ್ಟದ ಟೈಗರ್ 5+2 ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿ
ಸಕಲೇಶಪುರ : ರಾಜ್ಯ ಮಟ್ಟದ ಟೈಗರ್ 5+2 ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯನ್ನು ಮಾ.24, 25, 26 ರಂದು ನಡೆಯಲಿದ್ದು ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಲು ಬರಬೇಕೆಂದು ಎವರ್ ಗ್ರೀನ್ ಪುಟ್ಬಾಲ್ ತಂಡದ ಹಿರಿಯ ಆಟಗಾರ ನಾಗೇಶ್ ಮನವಿ ಮಾಡಿದ್ದಾರೆ.

ಪಟ್ಟಣದ ಸುಭಾಷ್ ಮೈದಾನದಲ್ಲಿ ಇಂದು ಸಂಜೆಯಿಂದ ಆರಂಭಗೊಳ್ಲಲಿರುವ ಪುಟ್ಬಾಲ್ ಪಂದ್ಯಾವಳಿಯ ಸಿದ್ದತೆ ಸಂಧರ್ಭದಲ್ಲಿ ಮಾತನಾಡಿದ ಅವರು ಎವರ್ ಗ್ರೀನ್ ಪುಟ್ಬಾಲ್ ತಂಡ ಸಕಲೇಶಪುರ ತಾಲೂಕಿನಲ್ಲಿ ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ತಾಲೂಕಿನಲ್ಲಿ ಪುಟ್ಬಾಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಪ್ರತಿ ವರ್ಷ ಎವರ್ ಗ್ರೀನ್ ಪುಟ್ಬಾಲ್ ತಂಡ 5+2 ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾವಳಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪಟ್ಟಣದ ಸುಭಾಷ್ ಮೈದಾನದಲ್ಲಿ ಆಯೋಜಿಸಲಾಗಿರುವ ಪುಟ್ಬಾಲ್ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 35 ಕ್ಕೂ ಹೆಚ್ಚು ತಂಡಗಳು ನೋಂದಾಯಿಸಿಕೊಂಡಿದೆ.ಈಗಾಗಲೆ ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ ಇತರೆ ಜಿಲ್ಲೆಗಳಿಂದ ಉತ್ತಮ ತಂಡಗಳು ಆಗಮಿಸಲಿದ್ದು, ಪುಟ್ಬಾಲ್ ಪ್ರೇಮಿಗಳಿಗೆ ರೋಮಾಂಚನಕಾರಿ ಪಂದ್ಯಗಳ ರಸದೌತಣ ಸಿಗಲಿದೆ. ವಿಜೇತ ತಂಡಕ್ಕೆ ಮೊದಲ ಬಹುಮಾನ 44,444/ ರೂ ಹಾಗೂ ಆಕರ್ಷಕ ಟ್ರೋಫಿ, ಎರಡನೇ ಬಹುಮಾನ 22,222/ರೂ ನಗದು ಹಾಗೂ ಆಕರ್ಷಕ ಟ್ರೋಫಿ ,ಮೂರನೇ ಬಹುಮಾನ 11,111/-ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಠ ಬಹುಮಾನ ಹಾಗೂ ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ನೀಡಿದವರಿಗೆ ಸರಣಿ ಶ್ರೇಷ್ಠ ಬಹುಮಾನ ನೀಡಲಾಗುತ್ತದೆ. ಎವರ್ ಗ್ರೀನ್ ಪುಟ್ಬಾಲ್ ವತಿಯಿಂದ ಪ್ರತಿವರ್ಷ ಪಂದ್ಯಾವಳಿ ಕ್ರೀಡಾಕೂಟವನ್ನು ಆಯೋಜನೆ ಮಾಡುವ ಉದ್ದೇಶ ಏನೆಂದರೆ ಸ್ಥಳೀಯವಾಗಿ ಯುವ ಪ್ರತಿಭೆಗಳು ಹೊರಹೊಮ್ಮಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ನಮ್ಮೂರಿಗೆ ನಮ್ಮ ಜಿಲ್ಲೆಗೆ ಪುಟ್ಬಾಲ್ ಕ್ರೀಡೆಯಲ್ಲಿ ಕೀರ್ತಿ ತರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಕ್ರೀಡಾಕೂಟ ಅಯೋಜನೆ ಮಾಡಿದ್ದೇವೆ ಎಂದರು. ಒಂದು ತಂಡದಲ್ಲಿ ಐವರು ಆಟಗಾರರಿದ್ದು, ಇದು ಮಿನಿ ಪುಟ್ಬಾಲ್ ಅಂದರೆ ಟೈಗರ್ 5+2 ಪುಟ್ಬಾಲ್ ಪಂದ್ಯಾವಳಿಯಾಗಿದೆ. ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೋಮಾಂಚನಕಾರಿ ದೃಶ್ಯ ಕಣ್ತುಂಬಿಕೊಳ್ಳುವುದರ ಜೊತೆಗೆ ಪಂದ್ಯಾವಳಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಎವರ್ ಗ್ರೀನ್ ಪುಟ್ಬಾಲ್ ತಂಡದ ಹಿರಿಯ ಆಟಗಾರ ಸಫೀರ್ ಮಾತನಾಡಿ, ಎವರ್ ಗ್ರೀನ್ ಪುಟ್ಬಾಲ್ ತಂಡವು ಕಳೆದ 60 ವರ್ಷದ ಹಿಂದೆ ಪ್ರಾರಂಭಗೊಂಡು ತಾಲೂಕಿನಲ್ಲಿ ಪುಟ್ಬಾಲ್ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಬಾರಿ ನಡೆಯುವ ಕ್ರೀಡಾಕೂಟದಲ್ಲಿ ರಾಜ್ಯದ ಪ್ರಖ್ಯಾತ ಪುಟ್ಬಾಲ್ ಆಟಗಾರರು, ರಾಜ್ಯಕ್ಕೆ ವಿದ್ಯಾಬ್ಯಾಸ ಹಾಗೂ ನೌಕರಿಗೆ ಬಂದಿರುವ ಅಂತರರಾಷ್ಟ್ರೀಯ ಆಟಗಾರರು ಸಹ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು. ತಾಲೂಕಿನ ಯುವ ಆಟಗಾರರಿಗಾಗಿ ಪ್ರತಿವರ್ಷ ನುರಿತ ತರಬೇತುದಾರರಿಂದ ಪುಟ್ಬಾಲ್ ಆಟ ಹೇಳಿ ಕೊಡಲಾಗುತ್ತಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಂಡದ ಹಿರಿಯ ಆಟಗಾರರು ಉಪಸ್ಥಿತರಿದ್ದರು.


                                    
