“ಮಲೆನಾಡ ಶಿವ ಸ್ತಂಭ” ದಿವಂಗತ ಶ್ರೀ ಬಿ.ಬಿ. ಶಿವಪ್ಪನವರು.
ಹಣವಂತರೆಲ್ಲಾ ಸಮಾಜ ಸೇವಾ ಧುರೀಣರಾಗಲು ಸಾಧ್ಯವಿಲ್ಲ. ಸಮಾಜ ಸೇವಾ ಮನೋಭಾವ ಇರುವವರೆಲ್ಲ ನಿಸ್ಪೃಹತೆಯಿಂದ ಸಮಾಜ ಸೇವೆಯ ದೀಕ್ಷೆಯನ್ನು ಪಡೆಯಲಾಗದು. ಅಂತರಂಗದಲ್ಲಿ ಅನುರಾಗವಿರಬೇಕು, ತುಡಿತವಿರಬೇಕು. ಅಂತರಂಗದ ಅಳಲಿನವರು ಮಾತ್ರ ಸಮಾಜದ, ಸಮಷ್ಟಿಯ ಬಗ್ಗೆ ಸಹಜ ಕಳಕಳಿಯನ್ನು ತಳೆಯಬಹುದು.ಅದು ವ್ಯಕ್ತಿಗತವಾಗಿರಬೇಕು. ಸ್ವಾರ್ಥ, ಸ್ವಪ್ರತಿಷ್ಟೆಗೆ ಸ್ಥಾನವಾಗಬಾರದು. ಅಂತಹ ನಿಶ್ಚಲ,
ನೀರವ ಮನೋಭಾವದ ವ್ಯಕ್ತಿಯಾಗಿದ್ದವರು ದಿವಂಗತ ಬಿ ಬಿ ಶಿವಪ್ಪನವರು. ಒಳ ಹೊರಗೆ ಸತ್ಯಶುದ್ಧರಾಗಿ ಸಮಾಜದ, ಮನುಜರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುವ ಸಹೃದಯ ಅವರದಾಗಿತ್ತು.ಯಾರನ್ನೂ ಮೆಚ್ಚಿಸಲು ಏನನ್ನೂ ಮಾಡಲಿಲ್ಲ, ಮಾಡುತ್ತಿರಲಿಲ್ಲ. ಸ್ವಾಭಾವಿಕವಾಗಿ ಅವರು ತಮ್ಮನ್ನು ತಾನೆ ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಆದರ್ಶಪ್ರಾಯರಾಗಿ ತೊಡಗಿಸಿಕೊಂಡಿದ್ದರು. ಆದರ್ಶ ರಾಜಕಾರಣಿಯಾಗಿದ್ದರು.
ಆದರೆ ರಾಜಕೀಯ ಚದುರಂಗದಾಟದಂತಹ ಚಾಣಾಕ್ಷತನದ ರಾಜಕೀಯವನ್ನು ಮಾತ್ರ ಮಾಡಲಿಲ್ಲ. ರಾಜಕೀಯ ಈ ಜೀವನದಲ್ಲಿ ವ್ಯಕ್ತಿಯ ನಿಜಸ್ವರೂಪವನ್ನು ಉಳಿಸಿ ಬೆಳೆಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅದರಿಂದಲೆ ಅವರ ಅದೃಷ್ಟವು ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಪೂರ್ತಿ ಅರಳಲು ಬಿಡದೆ ಕಾಡಿತು. ವ್ಯಕ್ತಿಗಳು ದೊಡ್ಡವರಾದರೆ “ಸಮಾಜವೂ ಈ ದೊಡ್ಡದಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಹಿತವನ್ನು ತನ್ನ ಸಾಧನೆಯ ಮಾರ್ಗಕ್ಕೆ ಬಳಸಿಕೊಂಡು ತನ್ನ ವಿಕಾಸವನ್ನು ಸಾಧಿಸಿಕೊಳ್ಳಬೇಕು.
ಅಂತರಂಗದ ವಿಕಾಸ ಪ್ರತಿಯೊಬ್ಬನ ಆಜನ್ಮ ಸಿದ್ಧವಾದ ಕರ್ತವ್ಯ. ಅದನ್ನು ಸಾಧಿಸಿದಾಗಲೇ ಮನುಷ್ಯತ್ವ ಸಾರ್ಥಕವಾಗುತ್ತದೆ. ಈ ಅರ್ಥದಲ್ಲಿ ತಮ್ಮ ಇಹ ಜೀವನವನ್ನು ಸಾಕಾರಗೊಳಿಸಿಕೊಂಡವರಲ್ಲಿ ಬಿ ಬಿ ಶಿವಪ್ಪ ನವರು ನಮ್ಮ ಮುಂದೆ. ಆದರ್ಶವಾಗಿದ್ದಾರೆ.
ಬಿ. ಬಿ. ಶಿವಪ್ಪ ನವರು ಬೇಳೂರಿನಲ್ಲಿ 1929ರ ಸೆಪ್ಟೆಂಬರ್ ತಿಂಗಳ 27 ರಂದು. ಶ್ರೀ ಬಸವೇಗೌಡರ ಶ್ರೀಮತಿ ಮುತ್ತಮ್ಮನವರ ಹಿರಿಯ ಮಗನಾಗಿ ಜನಿಸಿದರು.ಬೇಳೂರು ಬಸವೇಗೌಡ ಶಿವಪ್ಪ ಸರಳ ಜೀವಿ, ತುಂಬು ಗಾಂಭೀರ್ಯದ ಸಾತ್ವಿಕತೆ ಸೂಸುವ ಸಹೃದಯಿ, ಹಾಸ್ಯ ಮಿಶ್ರಿತ ಹಿತವಾದ ಮಾತುಗಳಿಗೆ, ನಿಷ್ಪಕ್ಷಪಾತ,ನಿರ್ಭೀತ ನಿರ್ಧಾರಗಳಿಗೆ, ಶುಭ್ರ, ದಿಟ್ಟ, ರಾಜಕೀಯ ಹೋರಾಟಕ್ಕೆ, ಸ್ವಾಭಿಮಾನಕ್ಕೆ, ಧರ್ಮ ಮಿಶ್ರಿತ ಸಮಾಜ ಸೇವಾ ಕಾರ್ಯಗಳಿಗೆ ಹೆಸರಾಗಿ ಜನಾನುರಾಗಕ್ಕೆ ಪಾತ್ರರಾದವರು ಶಿವಪ್ಪನವರು.
1952ರಲ್ಲಿ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟರು. ಮೊದಲು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಸಾರ್ವಜನಿಕ ಸೇವೆಯಲ್ಲಿ ಇವರು ಮೊದಲು ಅಲಂಕರಿಸಿದ್ದು ಕೆರೋಡಿ ಗ್ರಾಮ ಪಂಚಾಯ್ತಿಯ ಚುನಾಯಿತ ಅಧ್ಯಕ್ಷ ಹುದ್ದೆ. ನಂತರ 1962ರಲ್ಲಿ ಸಕಲೇಶಪುರ ತಾಲ್ಲೂಕು ಬೋರ್ಡಿನ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮುಂದೆ ಕಾಂಗ್ರೆಸ್ ಪಕ್ಷ ಇಬ್ಬಾಗವಾದಾಗ ಸಂಸ್ಥಾ ಕಾಂಗ್ರೆಸ್ ಪಕ್ಷ ಸೇರಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರಿಗೆ ನಿಕಟವರ್ತಿಗಳಾದರು.ತಾಲ್ಲೂಕು ಅಧ್ಯಕ್ಷರಾಗಿ, ಜಿಲ್ಲಾ ಅಧ್ಯಕ್ಷರಾಗಿ ಹಾಗೂ ರಾಜ್ಯದ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು.
ಮುಂದೆ ಬದಲಾದ ರಾಜಕೀಯದ ಬೆಳವಣಿಗೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಮೇಲೇರಿ ಜನತಾ ಪಕ್ಷ ಇಬ್ಬಾಗವಾದಾಗ ರಾಜಕೀಯ ಬೀಷ್ಮ ಪಿತಾಮಹ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಸಮ್ಮುಖದಲ್ಲಿ ಇವರು
ಹಾಸನದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಈ ಪಕ್ಷದಲ್ಲೂ ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆಯ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ನಂತರ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರ ಒತ್ತಡದ ಮೇಲೆ ರಾಜ್ಯದ ಅಧ್ಯಕ್ಷರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದರು.ರಾಜ್ಯದಾದ್ಯಂತ ಪತ್ನಿಯೊಡಗೂಡಿ ಸುತ್ತಾಡಿ ಪಕ್ಷಕ್ಕೆ ಬಲವಾದ ಬುನಾದಿ ಹಾಕಿ * ಬಿ.ಜೆ.ಪಿ ಎಂದರೆ ಶಿವಪ್ಪ, ಶಿವಪ್ಪ ಎಂದರೆ ಬಿ.ಜೆ.ಪಿ.’‘ ಎನ್ನುವಷ್ಟರ ಮಟ್ಟಿಗೆ ಪಕ್ಷಕ್ಕಾಗಿ ತನು, ಮನ,ಧನವನ್ನ ಅರ್ಪಿಸಿ ದುಡಿದರು. ಶ್ರೀ ವಾಜಪೇಯಿಯವರನ್ನೂ ಹಾಗೂ ಶ್ರೀ ಅಡ್ವಾನಿಯವರನ್ನ ತನ್ನ ಕಾರಿನಲ್ಲೇ ರಾಜ್ಯದಾದ್ಯಂತ ಕರೆದೊಯ್ದು ಪಕ್ಷವನ್ನು ಸಂಘಟಿಸಿದರು.
1983ರಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಲ್ಲಿ ಶಿವಪ್ಪನವರು ಪ್ರಮುಖ ಪಾತ್ರ ವಹಿಸಿದರು. ಏಕೆಂದರೆ ಅಂದಿನ ಅಲ್ಪ ಮೊತ್ತದ ಜನತಾಪಕ್ಷದ ಸರ್ಕಾರಕ್ಕೆ ಶಿವಪ್ಪನವರು
ಅಧ್ಯಕ್ಷರಾಗಿ 18 ಶಾಸಕರನ್ನು ಹೊಂದಿದ್ದ ಭಾ.ಜ.ಪಾ ಜನತಾ ಪಕ್ಷ ಸರ್ಕಾರವನ್ನು ರಚಿಸಲು ಬೆಂಬಲವನ್ನು ನೀಡಿತ್ತು.ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದುರಾದೃಷ್ಟದಿಂದ ಸೋಮವಾರಪೇಟೆ, ಬೆಂಗಳೂರಿನ ರಾಜಾಜಿನಗರ, ಹಾಗೂ ಸಕಲೇಶಪುರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋಲು, ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಸೋತರೂ, ಛಲಬಿಡದ ತ್ರಿವಿಕ್ರಮನಂತೆ ಸೋಲಿನ ಮೇಲೆ ಸೋಲಿನ ಪೆಟ್ಟನ್ನು ಅನುಭವಿಸಿದರೂ ಧೃತಿಗೆಡದೆ ಪಕ್ಷದ ರಾಜ್ಯಾಧ್ಯಾಕ್ಷರಾಗಿ ಪಕ್ಷವನ್ನು ಬಲಗೊಳಿಸಲು ಅವಿರತ ಶ್ರಮಿಸಿದರು. ಸಕ್ರಿಯ, ಪ್ರಾಮಾಣಿಕ ಕಾರ್ಯಕರ್ತಯಾಗಿ,ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆಯಾಗಿ ಪತ್ನಿ ಸುಶೀಲರವರು ಹೆಜ್ಜೆ ಹೆಜ್ಜೆಗೂ ಬೆಂಬಲವನ್ನಿತ್ತರು.
ಭಾ.ಜ.ಪ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ರಾಜ್ ಮಾತಾ ವಿಜಯರಾಜೇಸಿಂಧ್ಯಾರವರ ಜೊತೆಯಲ್ಲಿ ದಂಪತಿಗಳಿಬ್ಬರೂ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾನಿ, ಶ್ರೀಮತಿ ಸುಷ್ಠಾ ಸ್ವರಾಜ್ ಮುಂತಾದ ಭಾರತೀಯ ಜನತಾ ಪಕ್ಷದ ರಾಷ್ಟ್ರ ನಾಯಕರೊಂದಿಗೆ ನಿಕಟ ಆತ್ಮೀಯ ಸಂಬಂಧವಿದ್ದವರು, ಕೊನೆಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು 1985 ರಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಆ ಸಂದರ್ಭದಲ್ಲಿ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರಕ್ಕೆ ತಂದು ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದರು. 1994 ಹಾಗೂ 98 ರಲ್ಲಿ ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ವಿಧಾನ ಸಭಾ ಸದಸ್ಯರಾದರು.
ಹಲವಾರು ಭಾರಿ ವಿಧಾನ ಸಭೆಯ ಕಾರ್ಯಕಲಾಪಗಳನ್ನು ಸಭಾಪತಿಯ ಸ್ಥಾನದಲ್ಲಿದ್ದು ಸಮರ್ಪಕವಾಗಿ ನಿರ್ವಹಿಸಿದರು. ಆದರೆ ರಾಜಕೀಯ ಚದುರಂಗದಾಟದಲ್ಲಿ ಇವರು ಬಲಿಪಶುವಾಗಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ವಂಚಿತರಾದರು.ಇವರ ಮುಗ್ಧತನ, ಸರಳತನ, ಪ್ರಾಮಾಣಿಕತೆಯೇ ಇವರ ರಾಜಕೀಯ ಬೆಳವಣಿಗೆಗೆ ಮುಳುವಾಗಲು ಪ್ರಾರಂಭವಾಯಿತು.
ದಂಪತಿಗಳಿಬ್ಬರೂ ತನು-ಮನ-ಧನ ಆರ್ಪಿಸಿ ಕಟ್ಟಿದ ಪಕ್ಷವನ್ನು ತಾವೇ ತೊರೆಯುವ ಪರಿಸ್ಥಿತಿ ಶಿವಪ್ಪನವರಿಗೆ ಬಂದೊದಗಿತು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಸುಶೀಲಾರವರು ರಾಜಕೀಯದಿಂದ ದೂರ ಸರಿದರು. ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಇಂದಿನ ರಾಜಕೀಯದಲ್ಲಿ ಬೆಲೆ ಇಲ್ಲ ಎಂಬುದಕ್ಕೆ ಶಿವಪ್ಪನವರು ಜೀವಂತ ನಿದರ್ಶನ.
ಭಾರತೀಯ ಜನತಾ ಪಕ್ಷದ ಒಳ ರಾಜಕೀಯದಿಂದ ಅತಿಯಾಗಿನೊಂದ ಶಿವಪ್ಪನವರು ಕಾಂಗ್ರೆಸ್ ಪಕ್ಷವನ್ನು ಸೇರಿದಾಗ ನೀರಿನಿಂದ ಹೊರ ತೆಗೆದ ಮೀನಿನಂತಾದರು. ಸರಿಯಾದ ಸಹಕಾರವಿಲ್ಲದೆ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲು ಒಂದು ರೀತಿಯಲ್ಲಿ ಅವರ ಸಕ್ರಿಯ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಿದಂತಾಯಿತು. ಮರಳಿ ಭಾರತೀಯ ಜನತಾ ಪಕ್ಷ ಸೇರಿದ ಅವರು ಪಕ್ಷದ ಮೇಲೆ ಅಭಿಮಾನದಿಂದ ಹಾಗೂ ರಾಜಕೀಯ ಆಸಕ್ತಿ ಅವರಲ್ಲಿ ಮೈದುಂಬಿರುವುದರಿಂದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುವ ಸಂದರ್ಭ ಬಂದಿತು. ಪಕ್ಷದ ಮೇಲ್ಮಟ್ಟದ ನಾಯಕರುಗಳಿಂದ ಹಾಗೂ ಹಲವು ರಾಜಕೀಯ ಸ್ವಾರ್ಥ ರಾಜಕಾರಿಣಿಗಳಿಂದ ಕಡೆಗಾಣಿಸಲ್ಪಟ್ಟರೇ ಹೊರತು ಸಾಮಾನ್ಯ ಕಾರ್ಯಕರ್ತರ ಗೌರವಾದರಗಳಿಗೆ ಧಕ್ಕೆ ಬರಲಿಲ್ಲ. ಪಕ್ಷದ ಕಾರ್ಯಕರ್ತರಪ್ರೀತಿಯ ‘ಅಪ್ಪಾಜಿ’ ಯಾಗಿಯೇ ಉಳಿದರು. ಎಲ್ಲಾ ಪಕ್ಷದ ನಾಯಕರುಗಳ ಹಾಗೂ ಸಾಮಾನ್ಯ ಜನರ ಗೌರವವನ್ನು ಗಳಿಸಿ ಕೊನೆ ತನಕ ಅದನ್ನು ಉಳಿಸಿಕೊಂಡಿರುವ ಹಲವೇ ರಾಜಕೀಯ ಮುತ್ಸದ್ದಿಗಳಲ್ಲಿ ಶಿವಪ್ಪನವರು ಒಬ್ಬರೆಂದರೆ ಬಹುಶಃ ತಪ್ಪಾಗಲಾರದು.
‘ನ್ಯಾಯ ನಿಷ್ಟುರಿ ಶರಣನು ಆರಿಗೂ ಅಂಜ’ ಎಂಬ ಶರಣ ವಾಣಿಗೆ ನಿಚ್ಚಳ ಉದಾಹರಣೆಯಾಗಿ ಶಿವಪ್ಪನವರು ನ್ಯಾಯಕ್ಕೆ ಬೆಲೆ ನೀಡುತ್ತಾ ಬಂದಿರುವುದೇ ಇದಕ್ಕೆ ಪ್ರಮುಖ ಕಾರಣ.ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಹಾಸನದ ಮಲೆನಾಡು ತಾಂತ್ರಿಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದರು. ಕಾಫಿ ಮಂಡಳಿಯ ಸದಸ್ಯರಾಗಿ, ಮೈಸೂರಿನ ಎಂ.ಸಿ.ಪಿ.ಸಿ.ಎಸ್.ನ ಉಪಾಧ್ಯಕ್ಷರಾಗಿ ಕಾಫಿ ಉದ್ಯಮದಲ್ಲಿ ತಮ್ಮ ಹೆಸರನ್ನು ಮೂಡಿಸಿದ್ದಾರೆ.ಇವರ ಈ ಎಲ್ಲಾ ಸೇವೆಗೆ, ವ್ಯಕ್ತಿತ್ವಕ್ಕೆ ಸಂದ ಪುರಸ್ಕಾರವೆಂದರೆ ದಿನಾಂಕ 25-04-1995 ರಲ್ಲಿ ಪರಮಪೂಜ್ಯ ಕರ್ನಾಟಕ ರತ್ನ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಂದ “ಮಲೆನಾಡ ಶಿವ ಸ್ತಂಭ’‘ ಎಂಬಗೌರವ ಪಡೆದದ್ದು ನಮ್ಮೆಲ್ಲಗೂ ಆದರ್ಶವಾಗಿ ಉಳಿದಿದೆ. ಶ್ರೀ ಬಿ ಬಿ ಶಿವಪ್ಪ ಶ್ರೀಮತಿ ಸುಶೀಲಾ ಶಿವಪ್ಪ ದಂಪತಿಗಳಿಗೆ ಮೂವರು ಗಂಡು ಮಕ್ಕಳು.ಅವಳಿ ಜವಳಿ ಪ್ರತಾಪ್, ಪ್ರದೀಪ್ ಹಾಗು ಕಿರಿಯ ಮಗ ಸುಧೀರ್.
ಬಿ ಬಿ ಶಿವಪ್ಪನವರು 31 ಜುಲೈ 2017 ರಂದು ನಿಧನರಾದರು. ಅವರ ಪತ್ನಿ ಸುಶೀಲಾ ಶಿವಪ್ಪನವರು 07 ನವೆಂಬರ್ 2022ಲ್ಲಿ ನಿಧನರಾದರು.
ಯಡೇಹಳ್ಳಿ ಆರ್ ಮಂಜುನಾಥ್.